ಕುಡಿದ ಮತ್ತಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಕಾರು ಹತ್ತಿಸಿ ಲೇಬರ್ ಇನ್ ಸ್ಪೆಕ್ಟರ್ ಅವರನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಹೊರವಲಯದ ತಮಿಳುನಾಡಿನ ಹೊಸುರಿನಲ್ಲಿ ನಡೆದಿದೆ.
ಅರವಿಂದ್ ನಗರದ ನಿವಾಸಿ ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಶಿವಮೂರ್ತಿ (54) ಅವರನ್ನು ಕೊಲೆಗೈದ ಆರೋಪಿಗಳಾದ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಅವರನ್ನು ಬಂಧಿಸಲಾಗಿದೆ.
ಬಂಧಿತ ಮೂವರು ಕಾಲೇಜು ವಿದ್ಯಾರ್ಥಿಗಳು ಮೊದಲು ವಾಹನವೊಂದಕ್ಕೆ ಗುದ್ದಿದ್ದು, ನಂತರ ಬೇಕಂತಲೇ ಶಿವಮೂರ್ತಿ (54) ಅವರ ಮೇಲೆ ಕಾರು ಹಸಿದ್ದಾರೆ. ಅಪಘಾತದ ಬಳಿಕ ಜನರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಶಿವಮೂರ್ತಿ ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕುಪಿತಗೊಂಡ ಶಿವಮೂರ್ತಿ ಮತ್ತು ಕುಟುಂಬಸ್ಥರು ಮನೆಯಿಂದ ಹೊರಬಂದು ಪ್ರಶ್ನಿಸಿದ್ದಾರೆ. ಬಳಿಕ ಪರಸ್ಪರ ವಾಗ್ವಾದ ಜೋರಾಗಿದೆ. ಇಷ್ಟಕ್ಕೆ ಆರೋಪಿಗಳು ಏಕಾಏಕಿ ಕಾರಿನಿಂದ ಡೆಡ್ಲಿ ಆಕ್ಸಿಡೆಂಟ್ ಮಾಡಿದ್ದಾರೆ.
ಕಾರನ್ನ ಏಕಾಏಕಿ ಮುಂದೆ ಚಲಾಯಿಸಿ ಶಿವಮೂರ್ತಿ ಮೇಲೆ ಹರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೂಡ ಗಾಯಗೊಂಡಿದ್ದು, ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಈ ಕುರಿತು ಹೊಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



