ಉಡುಪಿ: ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ಯುವತಿಯನ್ನು ಗುಜರಾತ್ ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಚೈನ್ನೈ ಮೂಲದ ರೀನಾ ಜೊಶಿಲ್ಡ ಬಂಧಿತ ಆರೋಪಿ. ಇಂಜಿನಿಯರಿಂಗ್ ಅಧ್ಯಯನ ಮಾಡಿ ಚೆನ್ನೈಯಲ್ಲಿ ಉದ್ಯೋಗದಲ್ಲಿದ್ದ ರೀನಾ ಜೊಶಿಲ್ಡ, ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಳು.
ಜೂನ್ 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದ ರೀನಾಳನ್ನು ತನಿಖೆ ನಡೆಸಲು ಉಡುಪಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ ಅಹಮದಾಬಾದ್ ಪೊಲೀಸರು ವಿಚಾರಣೆ ನಡೆಸಿದ್್ದಾರೆ.
ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಕ್ಕೆ ನೀಡುವಂತೆ ಅಹಮದಾಬಾದ್ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ರೀನಾ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ಇದೇ ರೀತಿಯ ಇ-ಮೇಲ್ ಸಂದೇಶ ಕಳುಹಿಸಿದ್ದಳು. ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಳು.
ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ನಂತರ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.



