ನವದೆಹಲಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಕೇಂದ್ರ ಚುನಾವಣಾಧಿಕಾರಿಗಳ ಭಿನ್ನಾಭಿಪ್ರಾಯ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ವಿಪಕ್ಷಗಳು ಎಸ್ ಐಆರ್ ಹಾಗೂ ಚುನಾವಣೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಚರ್ಚೆಯ ವೇಳೆ ಭಿನ್ನಾಭಿಪ್ರಾಯ ಸಹಜ ಎಂದು ಆಯುಕ್ತರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಚುನಾವಣಾ ಅಕ್ರಮ ಹಾಗೂ ಅಕ್ರಮ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲು ದೇಶಾದ್ಯಂತ ನಡೆಯುತ್ತಿರುವ ಎಸ್ ಐಆರ್ ಪ್ರಕ್ರಿಯೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಕೇಂದ್ರ ಸಚಿವ ಜೈಶಂಕರ್, ಸೇನಾ ಮುಖ್ಯಸ್ಥರು, ವಿಜ್ಞಾನಿಗಳು ಸೇರಿದಂತೆ ಪ್ರಮುಖರ ಹೆಸರನ್ನೇ ಮತಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ಬಗ್ಗೆ ನೋಟಿಸ್ ಜಾರಿ ಮಾಡಿರುವುದು ದೊಡ್ಡ ಸುದ್ದಿಯಾಗಿತ್ತು. ಇದೀಗ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಇಬ್ಬರು ಚುನಾವಣಾ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ವಿಪಕ್ಷಗಳು ಎಸ್ ಐಆರ್ ಪ್ರಕ್ರಿಯೆ ಅಲ್ಲದೇ ಈ ಹಿಂದೆ ನಡೆದ ಚುನಾವಣೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ರಾಜಕೀಯ ಪಕ್ಷಗಳು ಮುಗಿಬೀಳುತ್ತಿದ್ದಂತೆ ಅಸಮಾಧಾನಗೊಂಡಿದ್ದ ಇಬ್ಬರು ಚುನಾವಣಾ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ‘ಯಾವುದೇ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಚರ್ಚೆಯ ಸಹಜ ಭಾಗವಾಗಿವೆ ಎಂದು ಸ್ಪಷ್ಟನೆ ನೀಡಿ ತೇಪೆ ಹಚ್ಚುವ ಕೆಲಸ ಮಾಡಿದರೆ, ಆಡಾಳಿತಾರೂಢ ಬಿಜೆಪಿ ಬೆಂಬಲಕ್ಕೆ ನಿಂತಿದೆ.
ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯೋಗವು ಇತ್ತೀಚೆಗೆ ನಡೆಸಿದ ಬಿಹಾರ, ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳ ಮೇಲೆ ಅನುಮಾನ ಉಂಟಾಗಿದೆ.
ಭಿನ್ನಾಭಿಪ್ರಾಯ ಸಹಜ
ಚುನಾವಣಾ ಆಯೋಗದಲ್ಲಿ ಕೇವಲ ಮೂವರು ಆಯುಕ್ತರು ಮಾತ್ರವಲ್ಲದೆ, ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲು ಆಯೋಗದ ಪ್ರತಿಯೊಬ್ಬ ಅಧಿಕಾರಿಗೂ ಸಲಹೆಗಳನ್ನು ನೀಡಲು ಪೂರ್ಣ ಅಧಿಕಾರವಿದೆ. ಚರ್ಚೆಯ ವೇಳೆ ಭಿನ್ನಾಭಿಪ್ರಾಯ ಇರುವುದು ಸಹಜ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆಯೋಗದ ಸದಸ್ಯರು ಎತ್ತಿರುವ ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳು ಮತದಾರರ ಹಕ್ಕುಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿರುತ್ತವೆ. ಆಯುಕ್ತರು ನೀಡಿರುವ ಸಲಹೆಗಳು ಚುನಾವಣಾ ಪ್ರಕ್ರಿಯೆಗಳನ್ನು ಇನ್ನಷ್ಟು ಸುಧಾರಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಹೇಳಿದೆ.
ಎಸ್‌ಐಆರ್ ಜಾರಿಗೊಳಿಸುವ ವೇಳೆ ವಿವಿಧ ವಿಷಯಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ಎತ್ತಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು. ಸಂಧು ಮತ್ತು ಜೋಶಿ ಎಸ್‌ಐಆರ್ ಕುರಿತು ಚುನಾವಣಾ ಆಯೋಗದ ನಿರ್ಧಾರಗಳಿಗೆ ಕಳೆದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಲ್ಲಿತ್ತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು, ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಮತ್ತು ಅಧಿಕಾರಾವಧಿ) ಕಾಯಿದೆ-2023ರ ಅಡಿಯಲ್ಲಿ ಆಯೋಗವು ಹೊರಡಿಸಿದ ಎಲ್ಲಾ ಅಧಿಕೃತ ಆದೇಶಗಳು, ನಿರ್ಧಾರಗಳು ಮತ್ತು ಆಡಳಿತಾತ್ಮಕ ನಿರ್ದೇಶನಗಳು ಪೂರ್ಣ ಕಾನೂನು ಮಾನ್ಯತೆಯನ್ನು ಹೊಂದಿವೆ. ಆಯೋಗದ ಎಲ್ಲಾ ಕ್ರಮಗಳು ಕಾನೂನುಗಳು ಮತ್ತು ಸೂಚನೆಗಳಿಗೆ ಅನುಗುಣವಾಗಿಯೇ ಇವೆ. ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ತಿಳಿಸಿದೆ.



