ಒಂದು ಕಾಲದಲ್ಲಿ ಸೈಕಲ್ ಮೇಲೆ ತಾಯಿತಾ, ಉಂಗುರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇದೀಗ ನೂರಾರು ಕೋಟಿಯ ಸಿರಿವಂತನಾಗಿದ್ದು, ದೇಶದಲ್ಲಿನ ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್ ಚಂಗೂರು ಬಾಬಾ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹಣದ ನೆರವು ಪಡೆಯುತ್ತಿರುವ ಜಮಾಲುದ್ದೀನ್ ಅಲಿಯಾಸ್ ಚಂಗೂರು ಬಾಬಾ ಈಗ 40 ಬ್ಯಾಂಕ್ ಖಾತೆಗಳಲ್ಲಿ 106 ಕೋಟಿ ಹೊಂದಿದ್ದು, ಹಲವು ಕೋಟಿ ಬೆಲೆಬಾಳುವ ಆಸ್ತಿ ಹೊಂದಿದ್ದಾನೆ.
ಉತ್ತರ ಪ್ರದೇಶದ ಬಲರಾಮ್ ಪುರ ಜಿಲ್ಲೆಯಲ್ಲಿ ಪೊಲೀಸರು ಮತಾಂತರ ಮಾಡುತ್ತಿದ್ದ ಜಾಲವನ್ನು ಭೇದಿಸಿದ್ದು, ಈ ಜಾಲದ ಹಿಂದಿನ ಮಾಸ್ಟರ್ ಮೈಂಡ್ ಆಗಿರುವ ಚಂಗೂರು ಬಾಬಾ ಮತ್ತು ಆತನ ಆಪ್ತ ನೀತು ಅಲಿಯಾಸ್ ನಾರ್ಸಿನ್ ಅವರನ್ನು ಲಕ್ನೋದ ಹೋಟೆಲ್ ನಲ್ಲಿ ಮಂಗಳವಾರ ಬಂಧಿಸಲಾಗಿದೆ.
ಬಡವರು, ಅಸಹಾಯಕ ಕಾರ್ಮಿಕರು, ಕೆಳವರ್ಗದವರು, ವಿಧವೆಯರು ಮುಂತಾದವರಿಗೆ ಹಣಕಾಸಿನ ನೆರವು ನೀಡುವ ಭರವಸೆ ಜೊತೆಗೆ ಬಲವಂತದ ಮತಾಂತರ ಮಾಡುತ್ತಿದ್ದರು. ಇದು ಮತಾಂತರ ನಿಷೇಧ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಚಂಗೂರು ಬಾಬಾ ಪಾಕಿಸ್ತಾನ ಸಂಪರ್ಕ ಹೊಂದಿದ್ದು, ಸುಮಾರು 30 ಮೊಬೈಲ್ ಸಂಖ್ಯೆ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಆಸ್ತಿ ನೆಲಸಮಕ್ಕೆ ಸೂಚನೆ ಹೊರಡಿಸಿದೆ.



