ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಗೆ ನಿಗದಿತ ತೆರಿಗೆ ಪಾವತಿಸದೇ ಅಕ್ರಮವಾಗಿ ಪ್ರಯಾಣಿಕರನ್ನು ಕೊಂಡೊಯ್ಯುವ ಅನ್ಯ ರಾಜ್ಯಗಳ ಟೂರಿಸ್ಟ್ ಬಸ್ಗಳನ್ನು ಶುಕ್ರವಾರ ಮುಂಜಾನೆ ಸಾರಿಗೆ ಅಧಿಕಾರಿಗಳ ತಂಡ ನಗರದಲ್ಲಿ ವಶಕ್ಕೆ ಪಡೆದಿದೆ.
ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ ಜಂಟಿ ಸಾರಿಗೆ ಆಯುಕ್ತೆ ಶೋಭಾ ಹಾಗೂ ಗಾಯತ್ರಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಮಿಳುನಾಡು, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಬಸ್ಗಳನ್ನು ತಡೆದು ಪರಿಶೀಲನೆ ನಡೆಸಿದಾಗ ತೆರಿಗೆ ಪಾವತಿಸದೇ ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯಕ್ಕೆ ತೆರಿಗೆ ಪಾವತಿಸದೇ ರಾಜ್ಯ ಸಾರಿಗೆ ಇಲಾಖೆಗೆ ನಷ್ಟ ಉಂಟು ಮಾಡಿದ್ದವು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಬೆಂಗಳೂರು – ಹೊಸೂರು ರಾಷ್ಟ್ರೀಯ ಹೆದ್ದಾರಿ ಆನೇಕಲ್ನ ಅತ್ತಿಬೆಲೆಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಖಾಸಗಿ ಬಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಬಸ್ಗಳ ಮಾಲೀಕರ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಕುರಿತು ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಅವರು ಮಾತನಾಡಿ ಶುಕ್ರವಾರ ಬೆಳಗಿನ ಜಾವ ಮೂರರಿಂದ ನಾಲ್ಕು ಗಂಟೆಯ ವೇಳೆ ನಾವು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು. ನಮ್ಮ ಬೆಂಗಳೂರಿನ ಎಲ್ಲ ಜಂಟಿ ಸಾರಿಗೆ ಆಯುಕ್ತರು ಹಾಗೂ ನಮ್ಮ ಆರ್ಟಿಒಗಳು, ಇನ್ಸ್ಪೆಕ್ಟರ್ಗಳು ಸೇರಿದಂತೆ ನಾವೆಲ್ಲರೂ ಇಂದು ಅತ್ತಿಬೆಲೆ ಚೆಕ್ಪೋಸ್ಟ್ ಬಳಿ ಬಂದು ನಿಂತಿದ್ದೆವು.
ಹೊರ ರಾಜ್ಯದಲ್ಲಿ ನೊಂದಣಿಯಾಗಿರುವ ಆಲ್ ಇಂಡಿಯಾ ಟೂರಿಸ್ಟ್ ಬಸ್ಗಳನ್ನು ನಾವಿಂದು ಕಾರ್ಯಾಚರಣೆ ಮಾಡಿದ್ದೇವೆ. ಏಕೆಂದರೆ, ಮೊದಲನೆಯದಾಗಿ ಪರವಾನಗಿ ನಿಯಮಗಳ ಉಲ್ಲಂಘನೆ ಇದೆ. ಎರಡನೆಯದಾಗಿ ನಮ್ಮ ಕರ್ನಾಟಕ ಸ್ಟೇಟ್ ಟ್ಯಾಕ್ಸ್ ಕಟ್ಟಿಲ್ಲ.
ನಮ್ಮ ರಾಜ್ಯದ ತೆರಿಗೆ ಕಟ್ಟಿಸಿಕೊಳ್ಳುವುದಕ್ಕಾಗಿ ಈ ವಾಹನಗಳನ್ನು ಸೀಜ್ ಮಾಡಿದ್ದೇವೆ. ಈ ವಾಹನಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನಾವು ಪರ್ಯಾಯ ವ್ಯವಸ್ಥೆಯನ್ನೂ ಸಹ ಮಾಡಿದ್ದೇವೆ. ಯಾರಿಗೂ ಏನೂ ತೊಂದರೆಯಾಗಿಲ್ಲ, ನಮ್ಮ ಅಧಿಕಾರಿಗಳು ತಂಡವನ್ನು ಮಾಡಿಕೊಂಡು ಕೂಡಲೇ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿದೆವು. ಹೊರ ರಾಜ್ಯದ ಟೂರಿಸ್ಟ್ ಬಸ್ಗಳನ್ನು ವಶಕ್ಕೆ ಪಡೆದಿರುವುದು ಇದೇ ಮೊದಲು ಎಂದು ನಾನು ಭಾವಿಸುತ್ತೇನೆ. ಸಾರಿಗೆ ಆಯುಕ್ತರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಯನ್ನು ಮಾಡಿದ್ದೇವೆ’ ಎಂದು ಹೇಳಿದ್ದಾರೆ.



