ಮೊದಲ ಇನಿಂಗ್ಸ್ ನಲ್ಲಿ ಭಾರೀ ಹಿನ್ನಡೆ… ಮೊದಲ ಓವರ್ ನಲ್ಲಿಯೇ 2 ವಿಕೆಟ್ ಪತನ… ಸರಣಿಯಲ್ಲಿ ಹಿನ್ನಡೆ.. ಈ ಎಲ್ಲಾ ಒತ್ತಡಗಳ ನಡುವೆ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ದಾಖಲೆಯ ಜೊತೆಯಾಟದಿಂದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಕಾಪಾಡಲು ಹೋರಾಟ ನಡೆಸಿದ್ದಾರೆ.
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕನೇ ದಿನವಾದ ಶನಿವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 669 ರನ್ ಗಳ ಬೃಹತ್ ಮೊತ್ತ ಪೇರಿಸಿ ಪತನಗೊಂಡಿದೆ. ಮೊದಲ ಇನಿಂಗ್ಸ್ ನಲ್ಲಿ 387 ರನ್ ಗಳಿಸಿದ್ದ ಭಾರತ 319 ರನ್ ಗಳ ಭಾರೀ ಹಿನ್ನಡೆ ಅನುಭವಿಸಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮೊದಲ ಓವರ್ ನಲ್ಲಿಯೇ ಕ್ರಿಸ್ ವೋಕ್ಸ್ ಆರಂಭಿಕ ಆಘಾತ ನೀಡಿದರು. ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಖಾತೆ ತರೆಯುವ ಮುನ್ನವೇ ವಿಕೆಟ್ ಕೈಚೆಲ್ಲಿದರು.
ನಂತರ ಜೊತೆಗೂಡಿದ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಮುರಿಯದ ಮೂರನೇ ವಿಕೆಟ್ ಗೆ 174 ರನ್ ಜೊತೆಯಾಟ ನಿಭಾಯಿಸಿದರು. ಗಿಲ್ 167 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 78 ರನ್ ಬಾರಿಸಿ ಔಟಾಗದೇ ಉಳಿದರೆ, ಕೆಎಲ್ ರಾಹುಲ್ 210 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 87 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಭಾನುವಾರ ಪಂದ್ಯದ ಅಂತಿಮ ದಿನವಾಗಿದ್ದು ಭಾರತ ಈ ಪಂದ್ಯ ಗೆಲ್ಲುವುದು ಅಸಾಧ್ಯವಾಗಿದ್ದು, ಕನಿಷ್ಠ ಡ್ರಾ ಮಾಡಿಕೊಳ್ಳಬೇಕಾದರೆ ಇಡೀ ದಿನ ವಿಕೆಟ್ ಕಾಯ್ದುಕೊಳ್ಳಬೇಕಾದ ಕಠಿಣ ಸವಾಲು ಹೊಂದಿದೆ. ಮೊದಲ ಓವರ್ ನಲ್ಲಿಯೇ ಎರಡು ವಿಕೆಟ್ ಕಳೆದುಕೊಂಡ ನಂತರ ರಾಹುಲ್ ಮತ್ತು ಗಿಲ್ ಅತೀ ದೊಡ್ಡ ಜೊತೆಯಾಟ ನಿಭಾಯಿಸಿದ ದಾಖಲೆ ಬರೆದಿದ್ದು, ಇದನ್ನು ಎಲ್ಲಿಯವರೆಗೆ ಮುಂದುವರಿಸಿ ತಂಡವನ್ನು ಪಾರು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.



