Wednesday, June 10, 2026
Google search engine
Homeಕ್ರೀಡೆಸಿಡ್ನಿ ಟೆಸ್ಟ್: ಒಂದೇ ದಿನ 15 ವಿಕೆಟ್ ಪತನ: ಭಾರತಕ್ಕೆ ಅಲ್ಪ ಮೇಲುಗೈ!

ಸಿಡ್ನಿ ಟೆಸ್ಟ್: ಒಂದೇ ದಿನ 15 ವಿಕೆಟ್ ಪತನ: ಭಾರತಕ್ಕೆ ಅಲ್ಪ ಮೇಲುಗೈ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ 15 ವಿಕೆಟ್ ಗಳು ಪತನಗೊಂಡಿದ್ದು, ಭಾರತ ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಮೇಲುಗೈ ಸಾಧಿಸಿದೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 1 ವಿಕೆಟ್ ಗೆ 9 ರನ್ ಗಳಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ ನಲ್ಲಿ 181 ರನ್ ಗೆ ಆಲೌಟಾಯಿತು. 4 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ.

ಭಾರತ ತಂಡ ಒಟ್ಟಾರೆ 145 ರನ್ ಗಳ ಮುನ್ನಡೆ ಪಡೆದಿದ್ದು, ಬಹುತೇಕ ಸಮಬಲದಲ್ಲಿರುವ ಪಂದ್ಯದಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿದೆ. ಕ್ರೀಸ್ ನಲ್ಲಿ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಉಳಿದುಕೊಂಡಿದ್ದು, ಬಾಲಂಗೋಚಿಗಳು ಎಷ್ಟು ರನ್ ಕಲೆ ಹಾಕುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಣಾಯವಾಗಲಿದೆ.

ಶಿಸ್ತಿನ ದಾಳಿ ನಡೆಸಿದ ಭಾರತೀಯ ಬೌಲರ್ ಗಳು ಆಸ್ಟ್ರೇಲಿಯಾ ಮೇಲುಗೈ ಸಾಧಿಸದಂತೆ ನೋಡಿಕೊಂಡು ಪ್ರಸಿದ್ಧ ಕೃಷ್ಣ ಮತ್ತು ಮೊಹಮ್ ಸಿರಾಜ್ ತಲಾ 3 ಹಾಗೂ ಬುಮ್ರಾ ಮತ್ತು ನಿತೀಶ್ ರೆಡ್ಡಿ ತಲಾ 2 ವಿಕೆಟ್ ಪಡೆದು ಆತಿಥೇಯರನ್ನು ಕಟ್ಟಿ ಹಾಕಿದರು.

ಆಸ್ಟ್ರೇಲಿಯಾ ಪರ ಬ್ಯುಯು ವೆಬ್ ಸ್ಟರ್ ಅರ್ಧಶತಕ ಬಾರಿಸಿ (57) ತಂಡ ಕಳಪೆ ಮೊತ್ತಕ್ಕೆ ಔಟಾಗದಂತೆ ಹೋರಾಟ ನಡೆಸಿದರು. ಸ್ಟೀವನ್ ಸ್ಮಿತ್ (33), ಅಲೆಕ್ಸ್ ಕ್ಯಾರಿ (21), ಸ್ಯಾಮ್ ಕೊನ್ಸಾಟಸ್ (23) ತಕ್ಕಮಟ್ಟಿಗೆ ಹೋರಾಟ ನಡೆಸಿದರು.

ನಂತರ ಎರಡನೇ ಇನಿಂಗ್ಸ್ ಆಡಲು ಇಳಿದ ಭಾರತ ತಂಡ ಸ್ಕಾಟ್ ಬೋಲ್ಯಾಂಡ್ ದಾಳಿಗೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕುಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ ಗೆ ಬರುತ್ತಿದ್ದಂತೆ ಹೊಡಿಬಡಿ ಆಟಕ್ಕೆ ಮುಂದಾದ ರಿಷಭ್ ಪಂತ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 61 ರನ್ ಬಾರಿಸಿ ಔಟಾದರು.

ಇನ್ನೂ ಮೂರು ದಿನಗಳ ಆಟ ಬಾಕಿ ಇದ್ದು, ಭಾರತ ಬಾಲಂಗೋಚಿಗಳ ಸಹಾಯದಿಂದ ಎಷ್ಟು ರನ್ ಗಳಿಸುತ್ತದೆ ಎಂಬುದರ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯಲಿದೆ. ಆದರೆ ಫಲಿತಾಂಶ ಹೊರಬೀಳುವುದು ಖಚಿತವಾಗಿದೆ. ಭಾರತ ಗೆದ್ದರೆ 2-2ರಿಂದ ಸರಣಿಯಲ್ಲಿ ಸಮಬಲ ಸಾಧಿಸಿದ ಗೌರವಕ್ಕೆ ಪಾತ್ರವಾಗಲಿದೆ. ಆಸ್ಟ್ರೇಲಿಯಾ ಗೆದ್ದರೆ 3-1ರಿಂದ ಸರಣಿ ತನ್ನದಾಗಿಸಿಕೊಳ್ಳಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments