ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಸರಾಮ್ ಬಾಪುಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
85 ವರ್ಷದ ಸ್ವಯಂ ಘೋಷಿತ ದೇವಮಾನವ ಅಸರಾಮ್ ಬಾಪು ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂಕೋರ್ಟ್ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜೈಲಿನಿಂದ ಬಿಡುಗಡೆ ಆದ ನಂತರ ಸಾಕ್ಷಿಗಳನ್ನು ನಾಶಪಡಿಸಬಾರದು ಹಾಗೂ ತಮ್ಮ ಅನುಯಾಯಿಗಳನ್ನು ಭೇಟಿ ಮಾಡಬಾರದು ಎಂಬ ಷರತ್ತನ್ನು ಅಸರಾಮ್ ಬಾಪುಗೆ ಸುಪ್ರೀಂಕೋರ್ಟ್ ವಿಧಿಸಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅಸರಾಮ್ ಬಾಪುಗೆ ಈಗಾಗಲೇ ಒಂದು ಬಾರಿ ಹೃದಯಾಘಾತವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಜಾಮೀನು ನೀಡಿದ್ದು, ಅಸರಾಮ್ ಬಾಪು ಮೇಲೆ ಕಣ್ಣಿಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಉಚ್ಛ ನ್ಯಾಯಾಲಯ ಆದೇಶಿಸಿದೆ.
2023ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಜೋಧಪುರ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ 2013ರಲ್ಲಿ ಮಹಿಳೆ ಮೇಲೆ ಪದೇಪದೆ ಅತ್ಯಾಚಾರ ಎಸಗಿದ್ದಕ್ಕಾಗಿ ಗುಜರಾತ್ ನ್ಯಾಯಾಲಯ ಕೂಡ ಶಿಕ್ಷೆ ವಿಧಿಸಿದೆ.
ಅಸರಾಮ್ ಬಾಪುಗೆ ಚಿಕಿತ್ಸೆಗಾಗಿ ಈ ಹಿಂದೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಡಿಸೆಂಬರ್ 18ರಂದು 17 ದಿನಗಳ ಕಾಲ ಪೆರೋಲ್ ನೀಡಲಾಗಿದ್ದು, ಜನವರಿ 1ರಂದು ಜೈಲಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮಧ್ಯಂತರ ಜಾಮೀನು ನೀಡಲಾಗಿದೆ.
Leave a Reply