ಭಾರತ ವಿರುದ್ಧದ ಐಸಿಸಿ ಟಿ-20 ವಿಶ್ವಕಪ್ ಪಂದ್ಯಗಳನ್ನು ಪಾಕಿಸ್ತಾನ ಬಹಿಷ್ಕರಿಸಿದೆ. ಆದರೆ ಬಹಿಷ್ಕಾರಕ್ಕೆ ಕಾರಣ ತಿಳಿಸಿಲ್ಲ.
ಪಾಕಿಸ್ತಾನ ಸರ್ಕಾರ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಿರುವುದಾಗಿ ಘೋಷಿಸಿ ಪೋಸ್ಟ್ ಮಾಡಿದೆ.
ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ ನಲ್ಲಿ ಆಡಲು ಶ್ರೀಲಂಕಾಗೆ ತೆರಳಲಿದೆ. ಆದರೆ ಫೆಬ್ರವರಿ 15ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದಾಗ ಬೆಂಬಲ ವ್ಯಕ್ತಪಡಿಸಿದ್ದ ಪಾಕಿಸ್ತಾನ ನಂತರ ಐಸಿಸಿ ಎಚ್ಚರಿಕೆ ಹಿನ್ನೆಲೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಅವಕಾಶ ಕೇಳಿತ್ತು.
ಜನವರಿ 24ರೊಳಗೆ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ನಿರ್ಧಾರವನ್ನು ಗುಟ್ಟಾಗಿ ಇಟ್ಟು ಅಭ್ಯಾಸ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿತ್ತು. ಆದರೆ ಇದೀಗ ಕೊನೆಯ ಗಳಿಗೆಯಲ್ಲಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಆಡುವುದಿಲ್ಲ ಎಂದು ಹೇಳಿದ ಬಾಂಗ್ಲಾದೇಶ ತಂಡವನ್ನು ಬೆಂಬಲಿಸಿದ್ದ ಏಕೈಕ ತಂಡವಾಗಿದ್ದ ಪಾಕಿಸ್ತಾನ ಹೊರನಡೆದಿದೆ. ಈಗಾಗಲೇ ಐಸಿಸಿ ಬಾಂಗ್ಲಾದೇಶ ಬದಲು ಐರ್ಲೆಂಡ್ ತಂಡಕ್ಕೆ ಆಡಲು ಅವಕಾಶ ನೀಡಿದೆ.
ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ ನಿಂದ ಹೊರಗಹಾಕಿದ ನಂತರ ಏಷ್ಯನ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಮೊಹಮದ್ ನಖ್ವಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ.
ಮೊಹಮದ್ ನಖ್ವಿ ಏಷ್ಯಾಕಪ್ ಟೂರ್ನಿ ವೇಳೆ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತ್ತು. ಅಲ್ಲದೇ ಪಾಕಿಸ್ತಾನ ಆಟಗಾರರ ಜೊತೆ ಹಸ್ತಲಾಘವ ಮಾಡಲು ನಿರಾಕರಿಸಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ನಖ್ವಿ ಪ್ರಶಸ್ತಿ ಹಸ್ತಾಂತರ ಮಾಡದೇ ತಮ್ಮ ಜೊತೆ ಎತ್ತಿಕೊಂಡು ಹೋಗಿದ್ದರು.



