ವಿಕೆಟ್ ಕೀಪರ್ ಮತ್ತು ಆರಂಭಿಕ ಸಂಜು ಸ್ಯಾಮ್ಸನ್ ಮಹೋನ್ನತ ಹೋರಾಟದಿಂದ ಭಾರತ ತಂಡ 5 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಸೂಪರ್-8 ವಿಭಾಗದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಗೆ ಅರ್ಹತೆ ಗಿಟ್ಟಿಸಿದರೆ ವೆಸ್ಟ್ ಇಂಡೀಸ್ ಅಭಿಯಾನ ಅಂತ್ಯಗೊಂಡಿತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 97 ರನ್ ಬಾರಿಸಿ ಅಜೇಯರಾಗಿ ಉಳಿದರು. 3 ರನ್ ಗಳಿಂದ ಶತಕ ವಂಚಿತರಾದರೂ ಮಹತ್ವದ ಪಂದ್ಯದಲ್ಲಿ ಫಾರ್ಮ್ ಗೆ ಮರಳಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಅಭಿಷೇಕ್ ಶರ್ಮ (10), ಇಶಾನ್ ಕಿಶನ್ (10) ನಿರಾಸೆ ಮೂಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (18) ನೆಲಕಚ್ಚಿ ಕೊಳ್ಳುವ ಹಂತದಲ್ಲಿ ವಿಕೆಟ್ ಕೈ ಚೆಲ್ಲಿದರು. ತಿಲಕ್ ವರ್ಮಾ (28) ಮತ್ತು ಹಾರ್ದಿಕ್ ಪಾಂಡ್ಯ (17) ಕೊನೆಯ ಹಂತದಲ್ಲಿ ಸಂಜು ಸ್ಯಾಮ್ಸನ್ ಗೆ ಉತ್ತಮ ಬೆಂಬಲ ನೀಡಿದರು.
ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ ಮತ್ತು ಶಮರ್ ಜೋಸೆಫ್ ತಲಾ 2 ವಿಕೆಟ್ ಪಡೆದರೂ ಕೊನೆಯ ಹಂತದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಪೈಪೋಟಿಯ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ನಾಯಕ ಶಾಯಿ ಹೋಪ್ (32) ಮತ್ತು ರೋಸ್ಟನ್ ಚೇಸ್ (40) ಮೊದಲ ವಿಕೆಟ್ ಗೆ 68 ರನ್ ಕಲೆ ಹಾಕಿ ಉತ್ತಮ ಆರಂಭ ನೀಡಿದರು.
ನಂತರ ಶಿರ್ಮೊನ್ ಹೇಟ್ಮೆಯರ್ (27) ಮತ್ತು ರುದರ್ಫೋಡ್ (17) ಬೇಗನೇ ಪೆವಿಲಯನ್ ಗೆ ಮರಳಿದರು. ಕೊನೆಯಲ್ಲಿ ರೋವ್ ಮನ್ (34) ಪೊವೆಲ್ ಮತ್ತು ಜೇಸನ್ ಹೋಲ್ಡರ್ (37) ಮುರಿಯುದ ೫ನೇ ವಿಕೆಟ್ ಗೆ 76 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 200ರ ಗಡಿ ಸಮೀಪ ತಲುಪಿಸಿದರು.



