ಮಹಾಕುಂಭದ ಮೇಳದಲ್ಲಿ ಬಟ್ಟಲು ಕಂಗಳ ಹುಡುಗಿ ಎಂದು ದೇಶಾದ್ಯಂತ ವೈರಲ್ ಆಗಿದ್ದ ಯುವತಿ ಮೊನಾಲಿಸಾ ಕೇರಳದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಫೇಸ್ ಬುಕ್ ಗೆಳೆಯನನ್ನು ಮದುವೆ ಆಗಿದ್ದಾರೆ.
18 ವರ್ಷದ ಮೊನಾಲಿಸಾ ಮಧ್ಯಪ್ರದೇಶದ ಇಂಧೋರ್ ನಿವಾಸಿಯಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಬಟ್ಟಲು ಕಂಗಳ ಯುವತಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು.
ಬಾಲಿವುಡ್ ಹಾಗೂ ಕೇರಳದಲ್ಲಿ ಸಿನಿಮಾದಲ್ಲಿ ನಟಿಸುವ ಆಹ್ವಾನ ಪಡೆದಿದ್ದ ಮೊನಾಸಿಲಾ ಫೇಸ್ ಬುಕ್ ನಲ್ಲಿ 6 ತಿಂಗಳ ಹಿಂದೆ ಪರಿಚಯವಾದ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಎಂಬ ವ್ಯಕ್ತಿಯ ಜೊತೆ ಕೇರಳದ ಪೂವರ್ ನಲ್ಲಿರುವ ಶ್ರೀ ನೈನಾರ್ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ.
ಮದುವೆಗೆ ಮೊನಾಲಿಸಾ ತಂದೆ ಜೈ ಸಿಂಗ್ ಭೋಸ್ಲೆ ಹುಡುಗ ಬೇರೆ ಧರ್ಮದವನು ಎಂಬ ಕಾರಣಕ್ಕೆ ವಿರೋಧಿಸಿದ್ದರು. ಅಲ್ಲದೇ ಸಂಬಂಧಿಕರಲ್ಲೇ ಒಬ್ಬರನ್ನು ಮದುವೆ ಆಗುವಂತೆ ಒತ್ತಡ ಹೇರಿದ್ದರು.
ಪ್ರಸ್ತುತ ಮಲಯಾಳಂನ ನಾಗಮ್ಮ ಚಿತ್ರದಲ್ಲಿ ನಟಿಸುತ್ತಿರುವ ಮೊನಾಲಿಸಾಳನ್ನು ಪತ್ತೆ ಹಚ್ಚಿ ಬಲವಂತವಾಗಿ ಊರಿಗೆ ಕರೆದುಕೊಂಡು ಹೋಗಲು ಯತ್ನಿಸಿದ್ದರು. ಈ ಘಟನೆ ಬೆನ್ನಲ್ಲೇ ಮೊನಾಲಿಸಾ ಹಾಗೂ ಗೆಳೆಯ ಫರ್ಮಾನ್ ಖಾನ್ ಕೇರಳದ ಥಾಂನೂರ್ ಪೊಲೀಸ್ ಠಾಣೆಗೆ ದೂರು ನೀಡಿ ಭದ್ರತೆ ಕೇಳಿದ್ದರು.
ತಂದೆಗೆ ದೂರವಾಣಿ ಕರೆ ಮಾಡಿದ ಪೊಲೀಸರು ಮೊನಾಲಿಸಾಗೆ 18 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮದುವೆ ಆಕೆಯ ಆಯ್ಕೆಯಂತೆ ನಡೆಯಬೇಕು ಎಂದು ಹೇಳಿದರು. ಇದಾದ ನಂತರ ಮೊನಾಲಿಸಾ ಹಾಗೂ ಗೆಳೆಯ ಇಬ್ಬರೂ ದೇವಸ್ಥಾನಕ್ಕೆ ತೆರಳಿ ಮದುವೆ ಆಗಿದ್ದಾರೆ. ಮದವೆಗೆ ಕೇರಳದ ಹಲವು ನಾಯಕರು ಹಾಗೂ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು.



