ಬೆಂಗಳೂರು: ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಜನರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದ್ದ 8,750 ಆನ್ಲೈನ್ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ಗಳ ಮೂಲಕ ಅಕ್ರಮವಾಗಿ ನಡೆಸುತ್ತಿದ್ದ ಬೆಟ್ಟಿಂಗ್ ದಂಧೆಯನ್ನು ಬೇಧಿಸಿರುವ ಕರ್ನಾಟಕ ರಾಜ್ಯ ಸೈಬರ್ ಘಟಕವು ನಡೆಸಿದ ತನಿಖೆಯಲ್ಲಿ ನೂರಾರು ಕೋಟಿ ರೂ ವಹಿವಾಟು ನಡೆದಿರುವುದನ್ನು ಪತ್ತೆಹಚ್ಚಿದೆ.
ಕೋಟ್ಯಂತರ ರೂ ಹಣದ ವಹಿವಾಟು ಸಂಬಂಧ ತನಿಖೆ ಚುರುಕುಗೊಳಿಸಿರುವ ಸೈಬರ್ ಘಟಕವು 137 ವೆಬ್ಸೈಟ್ ಎಜೆನ್ಸಿಗಳಿಗೆ ಪತ್ರ ಬರೆದು ಶಾಶ್ವತವಾಗಿ ಬ್ಲಾಕ್ ಮಾಡುವಂತೆ ರಾಜ್ಯ ಸೈಬರ್ ಘಟಕವು ತಿಳಿಸಿ ವಿಚಾರಣೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡುವಂತೆ ಕೇಳಿದೆ.
ಹಣವನ್ನು ಪಣವಾಗಿಸಿಕೊಂಡು ಸಾರ್ವಜನಿಕರನ್ನು ಜೂಜಿನಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ವೇದಿಕೆಗಳು ಹಾಗೂ ಮೊಬೈಲ್ ಅಪ್ಲಿಕೇಷನ್ಗಳಿಂದ ಸಂಘಟಿತವಾಗಿ ದಂಧೆ ನಡೆಸುತ್ತಿರುವ ಕುರಿತು ಗುಪ್ತಚರ ಮಾಹಿತಿ ಸಿಕ್ಕಿತ್ತು.
ಇದನ್ನು ಆಧರಿಸಿ ಇಂಡಿಯನ್ ಸೈಬರ್ ಕ್ರೈಂ ಕೋ-ಆರ್ಡಿನೇಷನ್ ಸೆಂಟರ್ (ಐ4ಸಿ) ಸಹಯೋಗದೊಂದಿಗೆ ದೇಶದೆಲ್ಲೆಡೆ ವಂಚಕ ಬೆಟ್ಟಿಂಗ್ ಜಾಲತಾಣಗಳ ಯುಆರ್ಎಲ್ಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿತ್ತು.
ಈ ವೇದಿಕೆಗಳನ್ನು ಬ್ಲಾಕ್ ಮಾಡಿದರೂ ಕ್ಷರ್ಣಾಧದಲ್ಲಿ ನಕಲಿ ಯುಆರ್ಎಲ್ ಸೃಷ್ಟಿಸಿ ಮಿರರ್ ಡೊಮೈನ್ ಹಾಗೂ ಸಬ್ ಡೊಮೈನ್ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದವು.
ಶಾಶ್ವತವಾಗಿ ಬೆಟ್ಟಿಂಗ್ ದಂಧೆ ನಡೆಸಲು ಅನುವು ಮಾಡಿಕೊಡದಿರುವ ಸಂಬಂಧ 137 ವೆಬ್ ಸೈಟ್ ಎಜೆನ್ಸಿಗಳಿಗೆ ಪತ್ರ ಬರೆಯಲಾಗಿದೆ. ದಂಧೆಯನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲು ದೇಶದ 37 ಇಂಟರ್ನೆಟ್ ಸೇವಾ ಸಂಸ್ಥೆಗಳು ಸಹಕಾರ ನೀಡಿವೆ ಎಂದು ಸೈಬರ್ ಕಮಾಂಡ್ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಚಂದ್ರಶೇಖರ್ ಮಾಹಿತಿ ನೀಡಿದರು.
ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡಿ ಸಾವಿರಾರು ಜನರು ಹಣ ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದ ಮಾನಸಿಕ ಖಿನ್ನತೆಗೆ ಜಾರಿದ್ದಾರೆ. ದೇಶದೆಲ್ಲೆಡೆ ಪಸರಿಸಿದ್ದ ಬೆಟ್ಟಿಂಗ್ ವೇದಿಕೆಗಳನ್ನು ಗುರುತಿಸಿ ನಿಷ್ಕ್ರಿಯಗೊಳಿಸಲಾಗಿದೆ.
ಈವರೆಗೂ ನೂರಾರು ಕೋಟಿ ಹಣದ ವಹಿವಾಟು ನಡೆದಿರುವ ಸಾಧ್ಯತೆಯಿದೆ. ವಂಚಕ ಕಂಪನಿಗಳ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದುಪ್ಪಟ್ಟು ಹಣ ಸಂಪಾದನೆ ಮಾಡಬಹುದು ಎಂದು ನಾಗರಿಕರಿಗೆ ಆಮಿಷವೊಡ್ಡಿ, ಹಣ ಪಾವತಿಸಿಕೊಂಡು ವಂಚಿಸುವ ಸೈಬರ್ ಖದೀಮರು ಸಹ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಗುಮಾನಿಯಿದೆ. ಬೆಟ್ಟಿಂಗ್ನಲ್ಲಿ ವಿಜೇತರಾದವರಿಗೆ ನಾಗರಿಕರಿಂದ ವಂಚಿಸಿದ ಹಣವನ್ನೇ ನೀಡಲಾಗುತ್ತಿರುವ ಬಗ್ಗೆ ಮಾಹಿತಿಯಿದೆ.
ಸದ್ಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯಸಂಹಿತೆಯಡಿ (ಬಿಎನ್ಎಸ್) ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಆನ್ಲೈನ್ ಬೆಟ್ಟಿಂಗ್ ಹಾಗೂ ಜೂಜು ನಿಷೇಧಿಸಿ 2025ರಲ್ಲಿ ಸರ್ಕಾರ ಕಾಯ್ದೆ ತಂದಿತ್ತು. ಇದನ್ನು ಪ್ರಶ್ನಿಸಿ ಬೆಟ್ಟಿಂಗ್ ಕಂಪನಿಗಳು ಸುಪ್ರೀಂ ಮೊರೆಹೋಗಿದ್ದವು. ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮೇ 27ರಂದು ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಇದರಿಂದ ಆನ್ಲೈನ್ ಬೆಟ್ಟಿಂಗ್ ದಂಧೆ ಪತ್ತೆ ಹಚ್ಚಲು ಪೂರಕವಾಯಿತು ಅವರು ಹೇಳಿದರು.



