ಮುಂಬೈ (ಮಹಾರಾಷ್ಟ್ರ): ಭಾರತೀಯ ಸಂಗೀತ ಲೋಕದ ದಿಗ್ಗಜೆ, ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಿದ್ದ 92 ವರ್ಷ ವಯಸ್ಸಿನ ಆಶಾ ಭೋಸ್ಲೆ ಅವರಿಗೆ ಶನಿವಾರ ಸಂಜೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದರು.
ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಭಾನುವಾರ ನಿಧನರಾದರು ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಪ್ರತೀತ್ ಸಮ್ದಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
8 ದಶಕಗಳ ಸೇವೆ
10ನೇ ವಯಸ್ಸಿಗೆ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಆಶಾ ಭೋಸ್ಲೆ ಸುಮಾರು 80 ವರ್ಷಗಳ ಕಾಲ 20ಕ್ಕೂ ಅಧಿಕ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಮನರಂಜಿಸಿದ್ದಾರೆ.
ಸಂಗೀತ ಲೋಕದ ದಂತಕತೆ ಲತಾ ಮಂಗೇಶ್ಕರ್ ಅವರ ಸೋದರಿ ಆಗಿರುವ ಆಶಾ ಭೋಸ್ಲೆ ವೈವಿಧ್ಯಯ ಹಾಡುಗಳಿಂದ ಮನೆಮಾತಾಗಿದ್ದರು. ಶಾಸ್ತ್ರಿಯ ಸಂಗೀತ ಮಾತ್ರವಲ್ಲದೇ ರ್ಯಾಪ್, ಕ್ಯಾಬರೆ, ಘಜಲ್ ಸೇರಿದಂತೆ ನಾನಾ ರೀತಿಯ ಹಾಡುಗಳ ಮೂಲಕ ಭಾರತದ ನೈಟಿಂಗಲ್ ಎಂದೇ ಖ್ಯಾತಿ ಪಡೆದಿದ್ದರು.
1933 ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ, 1943ರಲ್ಲಿ ರಾತ್ ಕೀ ರಾಣಿ ಚಿತ್ರದಲ್ಲಿ ಹಾಡುವ ಮೂಲಕ ಬಾಲಿವುಡ್ ಪ್ರವೇಶಿಸಿದರು. 8 ದಶಕಗಳಲ್ಲಿ ಹಿಂದಿ ಅಲ್ಲದೇ ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಸೇರಿದಂತೆ 20ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ್ದಾರೆ. 2022ರಲ್ಲಿ ಜಾಕಿ ಶ್ರಾಫ್ ನಟಿಸಿದ್ದ ಲೈಫ್ಸ್ ಗುಡ್ ಸಿನಿಮಾದ ರುತ್ ಭೀಗೆ ತಾನ್ ಅವರು ಹಾಡಿದ ಕೊನೆಯ ಹಾಡಾಗಿದೆ.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗದ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರಾದರು. 2011ರಲ್ಲಿ, ಸಂಗೀತ ಇತಿಹಾಸದಲ್ಲಿ ಹೆಚ್ಚು ಧ್ವನಿಮುದ್ರಣಗೊಂಡ ಕಲಾವಿದೆ ಎಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಬರೆದರು. ಅವರು ದಿವಂಗತ ನೌಶಾದ್, ದಿವಂಗತ ಎಸ್.ಡಿ.ಬರ್ಮನ್, ದಿವಂಗತ ಆರ್.ಡಿ. ಬರ್ಮನ್, ಶಂಕರ್-ಜೈಕಿಶನ್, ಕಲ್ಯಾಣ್-ಆನಂದ್, ಎ.ಆರ್.ರೆಹಮಾನ್ ಸೇರಿದಂತೆ ಹಲವಾರು ಸಂಗೀತಗಾರರು ಮತ್ತು ಗೀತರಚನೆಕಾರರೊಂದಿಗೆ ಕೆಲಸ ಮಾಡಿದ್ದಾರೆ.



