ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಕಾಡಿನೊಳಗೆ ಇದ್ದ ಜೇನುನೊಣಗಳು ಕನಿಷ್ಠ 200 ಬಾರಿ ಕಚ್ಚಿದ್ದರಿಂದ ಬೆಂಗಳೂರಿನ ತರಳು ಬಳಿ ತರಬೇತಿ ಪಡೆದಿದ್ದ ಸಿಆರ್ ಪಿಎಫ್ ಪಡೆಯ ಶ್ವಾನ `ರೊಲೊ’ ಅಸುನೀಗಿದೆ.
ಛತ್ತೀಸಗಢದ ಕೊರಗಟ್ಲು ಬೆಟ್ಟದ ನಡುವೆ ಅಡಗಿದ್ದ ನಕ್ಸಲರ ವಿರುದ್ಧ ಕಾರ್ಯಾಚರಣೆ ವೇಳೆ ಎರಡು ವರ್ಷದ ಜರ್ಮನ್ ಶೆಪರ್ಡ್ ಹೆಣ್ಣು ಶ್ವಾನ ರೊಲೊ ಜೇನುನೊಣಗಳ ದಾಳಿಯಿಂದ ಮೃತಪಟ್ಟಿದೆ.
ಮೇ 11ರವರೆಗೆ ನಕ್ಸಲರ ವಿರುದ್ಧ ನಡೆದ 21 ದಿನಗಳ ಸುದೀರ್ಘ ಕಾರ್ಯಾಚರಣೆ ವೇಳೆ ಏಪ್ರಿಲ್ 27ರಂದು ಜೇನುನೊಣಗಳ ಕಡಿತದಿಂದ ಗಾಯಗೊಂಡಿದ್ದ ರೊಲೊ ಶ್ವಾನ ಮೃತಪಟ್ಟಿದೆ.
ಕಾರ್ಯಾಚರಣೆ ವೇಳೆ ರೊಲೊ ಶ್ವಾನ, ಸುಧಾರಿತ ಬಾಂಬ್ ಸೇರಿದಂತೆ ನೆಲದಲ್ಲಿ ಹುದುಗಿಸಿಡುವ ಬಾಂಬ್ ಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿತ್ತು. ಸುದೀರ್ಘ ಕಾರ್ಯಾಚರಣೆ ವೇಳೆ 21 ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, ಇದೊಂದು ಮೃತ್ಯು ಕಾರ್ಯಾಚರಣೆ ಆಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ 18 ಯೋಧರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಹಲವು ಯೋಧರು ಕಾಲು ಮುರಿದುಕೊಂಡಿದ್ದಾರೆ. ಸಿಆರ್ ಪಿಎಫ್ ಮತ್ತು ಛತ್ತೀಸಗಢ ಪೊಲೀಸರು ಜಂಟಿಯಾಗಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಇದಾಗಿದೆ.
ಛತ್ತೀಸ್ ಗಢ ಮತ್ತು ತೆಲಂಗಾಣ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಿಜಾಪುರ ಮತ್ತು ಮುಳುಗು ಜಿಲ್ಲೆಗಳ ನಡುವಿರುವ ಕೊರಗಟ್ಲು ಪರ್ವತಶ್ರೇಣಿಯಲ್ಲಿ ಕರಡಿ, ಕಾಡು ಜೇನುನೊಣ, ಕಣಿವೆ ಹಾಗೂ ಜಲಚರಗಳಿಂದ ದಟ್ಟವಾದ ಕಾಡು ಇದಾಗಿದೆ.
ಏಪ್ರಿಲ್ 27ರಂದು ಏಕಾಏಕಿನ ಕಾಡಿನ ಜೇನುನೊಣಗಳು ದಾಳಿ ನಡೆಸಿದವು. ರೊಲೊ ಮೇಲೆ ದಾಳಿ ತಡೆಯಲು ನಾವು ಪಾಲಿಥಿನ್ ಕವರ್ ನಿಂದ ಮುಚ್ಚಿದೆವು. ಆದರೆ ಜೇನುನೊಣಗಳು ಅದರೊಳಗೆ ಹೋಗಿ ಕಚ್ಚಿದವು. ಇದರಿಂದ ನೋವು ತಡೆಯದ ರೊಲೊ ಕವರ್ ನಿಂದ ಹೊರಗೆ ಬಂದಿತ್ತು. ಇದರಿಂದ ಜೇನುನೊಣಗಳು ಮತ್ತಷ್ಟು ದಾಳಿ ಮಾಡಿದವು ಎಂದು ಸಿಆರ್ ಪಿಎಫ್ ಯೋಧ ಘಟನೆಯನ್ನು ವಿವರಿಸಿದ್ದಾರೆ.
ಜೇನುನೊಣಗಳ ದಾಳಿಗೆ ತತ್ತರಿಸಿದ ರೊಲೊ ಪ್ರಜ್ಞಾಹೀನವಾಗಿ ಕುಸಿದುಬಿದ್ದಿತು. ಕೂಡಲೇ ಶ್ವಾನಗೆ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ ನೋವು ತಡೆಯದೇ ರೊಲೊ ಮೃತಪಟ್ಟಿತು ಎಂದು ಅವರು ವಿವರಿಸಿದ್ದಾರೆ.
ರೊಲೊ ನಕ್ಸಲರ ವಿರುದ್ಧದ ಕಾರ್ಯಾಚರಣೆಗಾಗಿಯೇ ಬೆಂಗಳೂರು ಸಮೀಪದ ತರಳು ಬಳಿ ವಿಶೇಷ ತರಬೇತಿ ನೀಡಲಾಗಿತ್ತು.



