ನವದೆಹಲಿ: ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ ದೇಶದಲ್ಲೇ ಹೆಚ್ಚಾಗಿದ್ದು, ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ದೇಶದಲ್ಲಿ 2025ರಲ್ಲಿ 431 ಹಾವು ಕಡಿತದ ಸಾವುಗಳು ದಾಖಲಾಗಿವೆ. ಇದು 2024ರಲ್ಲಿನ 370 ಮತ್ತು 2023 ರಲ್ಲಿನ 183 ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಸೋಮವಾರ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದೆ.
ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಉತ್ತರಿಸಿದ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿ, ಆಯಾ ರಾಜ್ಯ ಸಾರ್ವಜನಿಕ ಆರೋಗ್ಯ ಕಾಯ್ದೆಗಳ ಅಡಿ ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಲು ಸಲಹೆ ನೀಡಿದೆ ಎಂದು ಅವರು ಹೇಳಿದರು.
‘ಕರ್ನಾಟಕ, ತಮಿಳುನಾಡು, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ 8 ರಾಜ್ಯಗಳು ಇಲ್ಲಿಯವರೆಗೆ ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು ಅಧಿಸೂಚಿತವೆಂದು ಘೋಷಿಸಿವೆ’ ಎಂದು ಸಚಿವರು ತಿಳಿಸಿದರು.
ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಕರ್ನಾಟಕವು ಅತಿ ಹೆಚ್ಚು (157) ಸಾವುಗಳನ್ನು ದಾಖಲಿಸಿದೆ, 2024ರಲ್ಲಿ 101 ಸಾವುಗಳು ದಾಖಲಾಗಿದ್ದರೆ, 2023ರಲ್ಲಿ 19 ಪ್ರಕರಣ ದಾಖಲಾಗಿತ್ತು.
ಆರೋಗ್ಯ ಸಚಿವಾಲಯವು ತನ್ನ 2024ರ ಹೇಳಿಕೆಯಲ್ಲಿ, ಭಾರತದಲ್ಲಿ ವಾರ್ಷಿಕವಾಗಿ ಅಂದಾಜು 3 – 4 ಮಿಲಿಯನ್ ಹಾವು ಕಡಿತಗಳಲ್ಲಿ ಸುಮಾರು 50,000 ಸಾವುಗಳು ಸಂಭವಿಸುತ್ತವೆ ಎಂದು ಹೇಳಿದೆ. ಇದು ಜಾಗತಿಕವಾಗಿ ಎಲ್ಲಾ ಹಾವು ಕಡಿತದ ಸಾವುಗಳಲ್ಲಿ ಅರ್ಧದಷ್ಟು ಎಂಬುದನ್ನು ತಿಳಿಸುತ್ತದೆ.
‘ದೇಶದಾದ್ಯಂತ ಹಾವು ಕಡಿತಕ್ಕೆ ಒಳಗಾದ ಸಂತ್ರಸ್ತರಲ್ಲಿ ಕೇವಲ ಒಂದು ಸಣ್ಣ ಭಾಗ ಮಾತ್ರ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಿಗೆ ತೆರಳುತ್ತಾರೆ. ಹಾವು ಕಡಿತದ ನಿಜವಾದ ಪ್ರಕರಣ ತೀರಾ ಕಡಿಮೆ ವರದಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅರಣ್ಯದ ಅಂಚು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ – ಹಾವು ಸಂಘರ್ಷ ಮತ್ತು ಆವಾಸಸ್ಥಾನ ನಷ್ಟ, ಹವಾಮಾನ ವೈಪರೀತ್ಯ ಮತ್ತು ಪರಿಸರ ಅಸಮತೋಲನದೊಂದಿಗೆ ಅದರ ಸಂಬಂಧದ ಬಗ್ಗೆ ಕೇಂದ್ರವು ಯಾವುದೇ ಮೌಲ್ಯಮಾಪನವನ್ನು ಕೈಗೊಂಡಿದೆಯೇ ಅಥವಾ ಅಧ್ಯಯನವನ್ನು ನಡೆಸಿದೆಯೇ? ಎಂದು ಮಲ್ಲಿಕಾರ್ಜುನ್ ಕೇಳಿದರು.



