ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಾರ್ವಜನಿಕ ಕುಂದುಕೊರತೆ ಆಲಿಸುವ ವೇಳೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದೂ ಅಲ್ಲದೇ ಕೂದಲು ಹಿಡಿದು ಎಳೆದಾಡಿದ ಆಘಾತಕಾರಿ ಘಟನೆ ನಡೆದಿದೆ.
ಬುಧವಾರ ಬೆಳಿಗ್ಗೆ ರೇಖಾ ಗುಪ್ತಾ ತಮ್ಮ ಅಧಿಕೃತ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸುತ್ತಿದ್ದ ವೇಳೆ ಹಲ್ಲೆ ನಡೆದಿದೆ. ಗುಜರಾತ್ ನ ರಾಜ್ ಕೋಟ್ ಮೂಲದ ನಿವಾಸಿ ರಾಜೇಶ್ ಸಕ್ರಿಯಾ ಎಂಬಾತ ಹಲ್ಲೆ ನಡೆಸಿದ್ದು, ಕೂಡಲೇ ಈತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದೆ.
ರೇಖಾ ಗುಪ್ತಾ ಸಾರ್ವಜನಿಕ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ದಿಢೀರನೆ ರಾಜೇಶ್ ಕಪಾಳಕ್ಕೆ ಬಾರಿಸಿದ್ದೂ ಅಲ್ಲದೇ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾನೆ. ಇದರಿಂದ ರೇಖಾ ಅವರಿಗೆ ತಲೆ ಹಾಗೂ ಮುಖದ ಬಳಿ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ವೇಳೆ ರಾಜೇಶ್ ಸಕ್ರಿಯಾ ಶ್ವಾನ ಪ್ರೇಮಿ ಆಗಿದ್ದು, ಇತ್ತೀಚೆಗೆ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಸ್ಥಳಾಂತರ ಮಾಡಬೇಕು. ಹಾಗೂ ಇವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎಂದು ತೀರ್ಪು ನೀಡಿದ್ದರ ಬಗ್ಗೆ ಅಸಮಾಧಾನಗೊಂಡಿದ್ದ.
ದಾಳಿಕೋರ ಸಿಎಂ ಮೇಲೆ ಹಲ್ಲೆ ಮಾಡಲು 24 ಗಂಟೆಗಳ ಕಾಲ ತಯಾರಿ ನಡೆಸಿದ್ದು, ಮನೆಯ ಸುತ್ತಮುತ್ತ ವೀಡಿಯೋ ಮಾಡಿ ಪರಿಶೀಲನೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಇಂದು ಬೆಳಗ್ಗೆ ಒಬ್ಬ ವ್ಯಕ್ತಿ ಸಿಎಂ ಬಳಿ ಬಂದು, ಕೆಲವು ಕಾಗದವನ್ನು ತೋರಿಸಿ, ಇದ್ದಕ್ಕಿದ್ದಂತೆ ಅವರ ಕೈ ಹಿಡಿದು ಅವರನ್ನು ತನ್ನ ಕಡೆಗೆ ಎಳೆಯಲು ಪ್ರಯತ್ನಿಸಿದರು. ಈ ಸಮಯದಲ್ಲಿ, ಸ್ವಲ್ಪ ನೂಕುನುಗ್ಗಲು ಉಂಟಾಯಿತು. ಜನರು ಅವರನ್ನು ಹಿಡಿದರು. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ. ಸಿಎಂ ಆರೋಗ್ಯ ಸ್ಥಿರವಾಗಿದ್ದು ವೈದ್ಯರು ಅವರನ್ನು ಪರೀಕ್ಷಿಸಿದ್ದಾರೆ. ನಾನು ಅವರನ್ನು ಭೇಟಿಯಾಗಿದ್ದೇನೆ. ಅವರ ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದೆ ಎಂದರು.
ದಾಳಿಕೋರ ಸಿಎಂ ಗುಪ್ತಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವದಂತಿಗಳನ್ನು ಸಚ್‌ದೇವ ಅವರು ಸಹ ತಳ್ಳಿಹಾಕಿದರು. “ಹೊಡೆತ ಅಥವಾ ಕಲ್ಲು ತೂರಾಟದ ಕಥೆಗಳೆಲ್ಲವೂ ಕಟ್ಟುಕಥೆ. ರಾಜಕೀಯದಲ್ಲಿ ಇಂತಹ ಘಟನೆಗಳು ಖಂಡನೀಯ. ಸಿಎಂ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ ಎಂದರು. ದೆಹಲಿ ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಪುರುಷ ಅಥವಾ ಸಾಮಾನ್ಯ ಮಹಿಳೆ ಹೇಗೆ ಸುರಕ್ಷಿತವಾಗಿರಲು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದರು.



