ಸುಮಾರು 50 ಮಂದಿಯನ್ನು ಕೊಂದು ಅವರ ಶವಗಳನ್ನು ಮೊಸಳೆಗೆ ಆಹಾರವಾಗಿ ಹಾಕಿದ್ದ ಗುಜರಾತ್ ಮೂಲದ ಸೈಕೊ ಆಯುರ್ವೆದಿಕ್ ವೈದ್ಯನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ದೌಸಾ ಆಶ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 67 ವರ್ಷದ ದೇವೇಂದ್ರ ಶರ್ಮಾನನ್ನು ಬಂಧಿಸಲಾಗಿದೆ. ಹಲವಾರು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದೇವೇಂದ್ರ ಶರ್ಮಾ ಪೆರೋಲ್ ಮೇಲೆ ಬಿಡುಗಡೆ ಆದ ನಂತರ ನಾಪತ್ತೆಯಾಗಿದ್ದ. ಇದೀಗ ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ್, ಹರಿಯಾಣ, ಗುರ್ಗಾಂವ್, ದೆಹಲಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ದೇವೇಂದ್ರ ಶರ್ಮಾ ಬೇಕಾಗಿದ್ದ. 2002ರಿಂದ 2014ರ ಅವಧಿಯಲ್ಲಿ ಹಲವಾರು ಟ್ಯಾಕ್ಸಿ ಹಾಗೂ ಟ್ರಕ್ ಡ್ರೈವರ್ ಗಳನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. 2023ರಲ್ಲಿ ಪೆರೋಲ್ ಮೇಲೆ ಬಿಡುಗಡೆ ಆಗಿದ್ದ.
ನಕಲಿ ಕರೆಗಳನ್ನು ಮಾಡಿ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಕಾರು ಬುಕ್ ಮಾಡುತ್ತಿದ್ದ. ಪ್ರವಾಸಕ್ಕೆ ಹೋದಾಗ ಚಾಲಕರನ್ನು ಕೊಂದು ಕಾರು ಹಾಗೂ ಇತರೆ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಶವಗಳು ಸಿಗಬಾರದು ಹಾಗೂ ಸಾಕ್ಷಿ ಸಿಗಬಾರದು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಕಸಗಂಜ್ ಜಿಲ್ಲೆಯ ಹಜಾರಾ ಚಾನೆಲ್ ನಲ್ಲಿ ಮೊಸಳೆಗೆ ಆಹಾರವಾಗಿ ಎಸೆದು ಬಿಡುತ್ತಿದ್ದ ಎಂದು ಡೆಪ್ಯೂಟಿ ಪೊಲೀಸ್ ಕಮಿಷನರ್ ಆದಿತ್ಯ ಗೌತಮ್ ವಿವರಿಸಿದ್ದಾರೆ.
ದೇವೇಂದ್ರ ಶರ್ಮ ವಿರುದ್ಧ ಈ ಹಿಂದೆಯೂ ಕೊಲೆ, ಕಿಡ್ನಾಪ್ ಹಾಗೂ ದರೋಡೆ ಮುಂತಾದ 27 ಪ್ರಕರಣಗಳು ಇದ್ದವು. 1995-2004ರ ನಡುವೆ ಅಕ್ರಮ ಕಿಡ್ನಿ ಮಾರಾಟ ದಂಧೆಯಲ್ಲಿ ಕೂಡ ಸಿಲುಕಿದ್ದ. 1984ರಲ್ಲಿ ಗುಜರಾತ್ ನಲ್ಲಿ ಕ್ಲಿನಿಕ್ ಓಪನ್ ಮಾಡಿದ್ದ ಈತ 125 ಅಕ್ರಮ ಕಿಡ್ನಿ ಕಸಿ ಮಾಡಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಏಜೆನ್ಸಿ ಹೊಂದಿದ್ದ ದೇವೇಂದ್ರ 1994ರಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸಿದ್ದರಿಂದ ಅಕ್ರಮ ಚಟುವಟಿಕೆಗಳಗೆ ಇಳಿದಿದ್ದ. ಗ್ಯಾಸ್ ಸಿಲಿಂಡರ್ ಏಜೆನ್ಸಿಗಾಗಿ 11 ಲಕ್ಷ ಬಂಡವಾಳ ಹೂಡಿ ನಷ್ಟಕ್ಕೆ ಒಳಗಾಗಿದ್ದ. ನಂತರ ನಕಲಿ ಗ್ಯಾಸ್ ಏಜೆನ್ಸಿ ಪಡೆದು ಅಡ್ಡ ದಾರಿ ಹಿಡಿಯಲು ಆರಂಭಿಸಿದ್ದ.
1996-2004ರ ಅವಧಿಯಲ್ಲಿ ಗ್ಯಾಂಗ್ ರಚಿಸಿಕೊಂಡ ದೇವೇಂದ್ರ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ವಾಹನಗಳನ್ನು ತಡೆಯಲು ಆರಂಭಿಸಿದ. ಟ್ರಕ್ ಚಾಲಕರನ್ನು ಕೊಂದು ಗ್ಯಾಸ್ ಕದಿಯಲು ಆರಂಭಿಸಿದ. ನಂತರ ಕಾರು ಚಾಲಕರ ಮೇಲೆ ಈತನ ಕಣ್ಣು ಬಿದ್ದಿತು.
ಕೊಲೆ ಮಾಡಿದ ಟ್ರಕ್ ಡ್ರೈವರ್ ಗಳನ್ನು ಮೊಸಳೆಗೆ ಹಾಕುತ್ತಿದ್ದ. ನಂತರ ವಾಹನಗಳ ಬಿಡಿಭಾಗಗಳನ್ನು ಸಹಚರರು ಮಾರಾಟ ಮಾಡುತ್ತಿದ್ದರು. ಈ ರೀತಿ ಒಂದು ವಾಹನದಿಂದ 7 ಲಕ್ಷ ರೂ. ಸಂಪಾದಿಸುತ್ತಿದ್ದ. ದೆಹಲಿ, ಹರಿಯಾಣ ಮುಂತಾದೆಡೆ ನಡೆದ 7 ಪ್ರತ್ಯೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಕೂಡ ವಿಧಿಸಲಾಗಿದೆ. ಆದರೆ ಪೊಲೀಸರ ಪ್ರಕಾರ ಈತ ಕನಿಷ್ಠ 50 ಕೊಲೆಗಳನ್ನು ಮಾಡಿದ್ದಾನೆ.



