ಇಂಧನ, ಗ್ಯಾಸ್ ಖರೀದಿಸುವ ಮೂಲಕ ರಷ್ಯಾದಿಂದ ವ್ಯವಹಾರ ಮುಂದುವರಿಸಿದರೆ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳ ಮೇಲೆ ಆರ್ಥಿಕ ನಿರ್ಬಂಧ ಅಥವಾ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಟೊ ಎಚ್ಚರಿಕೆ ನೀಡಿದೆ.
ಅಮೆರಿಕದ ಸೆನೆಟರ್‌ಗಳನ್ನು ಬುಧವಾರ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ, ಭಾರತ, ಚೀನಾ, ಬ್ರೆಜಿಲ್ ಪ್ರಧಾನಿಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಗಂಭೀರವಾದ ಶಾಂತಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಚೀನಾ ಅಧ್ಯಕ್ಷ, ಬ್ರೆಜಿಲ್ ಅಧ್ಯಕ್ಷ, ಭಾರತದ ಪ್ರಧಾನಿ ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವುದನ್ನು ಮುಂದುವರಿಸಿದರೆ ಶೇ.100ರಷ್ಟು ಆರ್ಥಿಕ ನಿರ್ಬಂಧ ಅಥವಾ ತೆರಿಗೆ ಹೇರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಶಾಂತಿ ಮಾತುಕತೆಗೆ ಬದ್ಧರಾಗುವಂತೆ ಪುಟಿನ್‌ಗೆ ನೇರವಾಗಿ ಒತ್ತಾಯಿಸುವಂತೆ ರುಟ್ಟೆ ಮೂರು ರಾಷ್ಟ್ರಗಳ ನಾಯಕರಿಗೆ ಕರೆ ನೀಡಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು ತಿಳಿಸಿ. ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಹೊಸ ಮಿಲಿಟರಿ ಬೆಂಬಲವನ್ನು ಘೋಷಿಸಿದ್ದಾರೆ. ಅಲ್ಲದೇ, ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದರ ಬೆನ್ನಲ್ಲೇ ನ್ಯಾಟೋ ಅಧ್ಯಕ್ಷರು ಅದೇ ಮಾದರಿಯಲ್ಲಿ ನಿರ್ಬಂಧ ಹಾಕುವುದಾಗಿ ಬೆದರಿಸಿದ್ದಾರೆ.
ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು 50 ದಿನಗಳಲ್ಲಿ ನಿಲ್ಲಿಸದೇ ಇದ್ದರೆ ರಷ್ಯಾದ ರಫ್ತುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.



