ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಸಿಡಿಲಬ್ಬರದ ಆಟದ ನೆರವಿನಿಂದ ಭಾರತ ತಂಡ 7 ವಿಕೆಟ್ ಗಳಿಂದ ಆಫ್ಘಾನಿಸ್ತಾನ ತಂಡವನ್ನು ಸೋಲಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಗೆ ಲಗ್ಗೆ ಹಾಕಿದೆ.
ಹರಾರೆಯಲ್ಲಿ ಬುಧವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ ಇಬ್ಬರ ಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 310 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 41.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ಶುಕ್ರವಾರ ನಡೆಯಲಿರುವ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಫ್ಘಾನಿಸ್ತಾನ ಫೀಲ್ಡಿಂಗ್ ನಲ್ಲಿ ಮುಗ್ಗರಿಸಿತು. ಭಾರತದ ಬ್ಯಾಟ್ಸ್ ಮನ್ ಗಳಿಗೆ ಹಲವಾರು ಜೀವದಾನ ನೀಡುವ ಮೂಲಕ ಪಂದ್ಯವನ್ನು ಕೈಚೆಲ್ಲಿತು.
ವೈಭವ್ ಸೂರ್ಯವಂಶಿ ಮತ್ತು ಏರಾನ್ ಜಾರ್ಜ್ ಮೊದಲ ವಿಕೆಟ್ ಗೆ 57 ಎಸೆತಗಳಲ್ಲಿ 90 ರನ್ ಕಲೆ ಹಾಕಿ ಭರ್ಜರಿ ಆರಂಭ ನೀಡಿದರು. ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 68 ರನ್ ಚಚ್ಚಿದರು.
ಮತ್ತೊಂದು ತುದಿಯಲ್ಲಿ ಬಂಡೆಯಂತೆ ನಿಂತ ಏರಾಜ್ ಜಾರ್ಜ್ 95 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಏರಾನ್ 104 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 115 ರನ್ ಬಾರಿಸಿ ಕೊನೆಯ ಹಂತದಲ್ಲಿ ಎಡವಿದರು.
ಎರಡನೇ ವಿಕೆಟ್ ಗೆ ನಾಯಕ ಆಯುಷ್ ಮಾತ್ರೆ ಜೊತೆ 114 ರನ್ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು. ಆಯುಷ್ ಮಾತ್ರೆ 59 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 62 ರನ್ ಗಳಿಸಿ ಔಟಾದರೆ, ವಿಹಾನ್ ಮಲ್ಹೋತ್ರಾ 47 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 38 ರನ್ ಬಾರಿಸಿ ಔಟಾಗದೇ ಉಳಿದರು.
ಆಫ್ಘಾನಿಸ್ತಾನಕ್ಕೆ ಡಬಲ್ ಶತಕದ ಬಲ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ ಮಧ್ಯಮ ಕ್ರಮಾಂಕದಲ್ಲಿ ಫೈಸಲ್ ಶಿನೊಜಾದಾ ಮತ್ತು ಉಜೆರುಲ್ಲಾ ನಿಯಾಜೈ ಅವರ ಶತಕಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.
ಫೈಸಲ್ 93 ಎಸೆತಗಳಲ್ಲಿ 15 ಬೌಂಡರಿ ಸಹಾಯದಿಂದ 110 ರನ್ ಗಳಿಸಿ ಔಟಾದರೆ, ನಿಯಾಜೈ 86 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 101 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರಂಭಿಕರಾದ ಓಸಮನ್ ಸದತ್ (39) ಮತ್ತು ಖಾಲಿದ್ ಅಮದಜಾಯಿ (31) ಉತ್ತಮ ಆರಂಭ ನೀಡಿದರು.



