ರೈಲು ಹೈಜಾಕ್ ಮಾಡಿದ್ದ 27 ಬಲೂಚಿಸ್ತಾನದ ಬಂಡುಕೋರರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಸೇನೆ 150 ಒತ್ತೆಯಾಳುಗಳನ್ನು ರಕ್ಷಿಸಿದೆ.
ಪಾಕಿಸ್ತಾನ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ರೈಲನ್ನು ನಿನ್ನೆ ಅಪಹರಿಸಿದ್ದ ಬಂಡುಕೋರರು ಬಲೂಚಿಸ್ತಾನಕ್ಕೆ ಕೊಂಡೊಯ್ದಿದ್ದರು. ಮಂಗಳವಾರ ರಾತ್ರಿ ಪೂರ್ಣ ಪ್ರಮಾಣದ ಸೇನೆ ಬಳಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ 27 ಬಂಡುಕೋರರನ್ನು ಕೊಂದು 150 ಪ್ರಯಾಣಿಕರನ್ನು ರಕ್ಷಿಸಿದೆ.
ಒತ್ತೆಯಾಳುಗಳಾಗಿ ಇದ್ದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಗುಂಡಿನ ಚಕಮಕಿಯಲ್ಲಿ ಎಷ್ಟು ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿ ಬಲೂಚಿಸ್ತಾನ ಲಿಬರಲ್ ಆರ್ಮಿ [ಬಿಎಲ್ ಎ] ರೈಲನ್ನು ಹೈಜಾಕ್ ಮಾಡಿದ್ದು, ಪಾಕಿಸ್ತಾನ ಸೇನೆಯ 30 ಮಂದಿಯನ್ನು ಹತ್ಯೆಗೈದ್ದು, 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದೆ ಎಂದು ಹೇಳಿಕೊಂಡಿತ್ತು.
ಪಾಕಿಸ್ತಾನದ ಬಲೂಚಿಸ್ತಾನದ ಕೆಟ್ಟಾದಿಂದ ಪೇಶಾವರದ ಖೈಬರ್ ಪಕ್ತುಕ್ವಾಗೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಿಸಲಾಗಿದೆ. ಪಾಕಿಸ್ತಾನ ಸೇನೆ ಕಾರ್ಯಾಚರಣೆ ಆರಂಭಿಸಿದರೆ ಪ್ರಯಾಣಿಕರನ್ನು ಕೊಲ್ಲುವುದಾಗಿ ಬಲೂಚಿಸ್ತಾನ ಲಿಬರಲ್ ಆರ್ಮಿ ಪ್ರಕರಣೆಯಲ್ಲಿ ಎಚ್ಚರಿಸಿದೆ.
ಬಲೂಚಿಸ್ತಾನಕ್ಕೆ ತಲುಪುವ ಮುನ್ನ 17 ಸುರಂಗಗಳು ಇದ್ದು, ಈ ಸಂದರ್ಭದಲ್ಲಿ ರೈಲು ನಿಧಾನವಾಗಿ ಚಲಿಸುತ್ತದೆ. ಈ ಸಂದರ್ಭವನ್ನೇ ಲಾಭ ಮಾಡಿಕೊಂಡ ಬಂಡುಕೋರರು ರೈಲು ಹಳಿಗಳನ್ನು ಸ್ಫೋಟಿಸಿ ರೈಲನ್ನು ತಡೆದು ನಿಲ್ಲಿಸಿದ್ದಾರೆ.