ಇಸ್ಲಾಮಾಬಾದ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿ ಬಲೂಚಿಸ್ತಾನ ಲಿಬರಲ್ ಆರ್ಮಿ [ಬಿಎಲ್ ಎ] ರೈಲನ್ನು ಹೈಜಾಕ್ ಮಾಡಿದ್ದು, ಪಾಕಿಸ್ತಾನ ಸೇನೆಯ 11 ಮಂದಿಯನ್ನು ಹತ್ಯೆಗೈಯ್ಯಲಾಗಿದ್ದು, 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದೆ.
ಪಾಕಿಸ್ತಾನದ ಬಲೂಚಿಸ್ತಾನದ ಕೆಟ್ಟಾದಿಂದ ಪೇಶಾವರದ ಖೈಬರ್ ಪಕ್ತುಕ್ವಾಗೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಿಸಲಾಗಿದೆ. ಪಾಕಿಸ್ತಾನ ಸೇನೆ ಕಾರ್ಯಾಚರಣೆ ಆರಂಭಿಸಿದರೆ ಪ್ರಯಾಣಿಕರನ್ನು ಕೊಲ್ಲುವುದಾಗಿ ಬಲೂಚಿಸ್ತಾನ ಲಿಬರಲ್ ಆರ್ಮಿ ಪ್ರಕರಣೆಯಲ್ಲಿ ಎಚ್ಚರಿಸಿದೆ.
ಬಲೂಚಿಸ್ತಾನಕ್ಕೆ ತಲುಪುವ ಮುನ್ನ 17 ಸುರಂಗಗಳು ಇದ್ದು, ಈ ಸಂದರ್ಭದಲ್ಲಿ ರೈಲು ನಿಧಾನವಾಗಿ ಚಲಿಸುತ್ತದೆ. ಈ ಸಂದರ್ಭವನ್ನೇ ಲಾಭ ಮಾಡಿಕೊಂಡ ಬಂಡುಕೋರರು ರೈಲು ಹಳಿಗಳನ್ನು ಸ್ಫೋಟಿಸಿ ರೈಲನ್ನು ತಡೆದು ನಿಲ್ಲಿಸಿದ್ದಾರೆ.
ರೈಲಿನ ಮೇಲೆ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಪಾಕಿಸ್ತಾನ ಸೈನಿಕರು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, 11 ಯೋಧರು ಮೃತಪಟ್ಟಿದ್ದಾರೆ. ರೈಲು ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈಲಿನ ಮೇಲೆ ದಾಳಿ ಆದ ಸುದ್ದಿ ತಿಳಿದ ಕೂಡಲೇ ಪಾಕಿಸ್ತಾನ ಸೈನಿಕರು ಸ್ಥಳಕ್ಕೆ ದೌಡಾಯಿಸಿ ರೈಲು ತಡೆಯಲು ಬಾಂಬ್ ದಾಳಿ ನಡೆಸಿದ್ದಾರೆ. ಆದರೆ ಬಂಡುಕೋರರು ತಾವು ಬಯಸಿದ್ದ ಸ್ಥಳಕ್ಕೆ ರೈಲು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಡುಕೋರರು ನಂತರ ಬಲೂಚಿಸ್ತಾನದ ಬಾಲೂ ಜಿಲ್ಲೆಯ ಮುಷ್ತಾಕ್ ಎಂಬಲ್ಲಿ ರೈಲನ್ನು ಕೊಂಡೊಯ್ದಿದ್ದಾರೆ. ರೈಲು ಅಪಹರಿಸಿದ ಜಾಗಕ್ಕೆ ಪಾಕಿಸ್ತಾನ ಹಿರಿಯ ಸೇನಾಧಿಕಾರಿಗಳು ಆಗಮಿಸಿದ್ದಾರೆ. ಯೋಧರನ್ನು ಹತ್ಯೆಗೈದ ಬಂಡುಕೋರರನ್ನು ಸುಮ್ಮನೆ ಬಿಡುವ ಸಾಧ್ಯತೆ ಇಲ್ಲ. ಆದರೆ ಪರಿಸ್ಥಿತಿ ನೋಡಿಕೊಂಡು ಕಾರ್ಯತಂತ್ರ ರೂಪಿಸುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಮೊಹಸಿನ್ ನಕ್ವಿ ಹೇಳಿದ್ದಾರೆ.