ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದರೆ ತಕ್ಕ ಬುದ್ದಿ ಕಲಿಸಬೇಕಾಗುತ್ತದೆ. ತಪ್ಪು ಮಾಡಿರುವ ಇಸ್ರೇಲ್ ಗೆ ಶಿಕ್ಷೆ ಖಂಡಿತ ಆಗಲಿದೆ ಎಂದು ಇರಾನ್ ಸುಪ್ರೀಂ ಅಯೊತೊಲ್ಲಾಹ್ ಅಲಿ ಖಮೆನೈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೇಶವನ್ನು ಉದ್ದೇಶಿಸಿ ಬುಧವಾರ ಭಾಷಣ ಮಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಷರತ್ ಶರಣಾತಿ ಪ್ರಸ್ತಾಪವನ್ನು ತಿರಸ್ಕರಿಸಿದರು.
ಇರಾನ್ ಯಾವುದೇ ಕಾರಣಕ್ಕೂ ಯಾರಿಗೂ ಶರಣಾಗುವುದಿಲ್ಲ. ಟೆಹರ್ರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ಇದನ್ನು ಇರಾನ್ ದಿಟ್ಟವಾಗಿ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬುದ್ದಿವಂತರಿಗೆ ಇರಾನ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಇರಾನ್ ಇತಿಹಾಸ ಬಲ್ಲವರಿಗೆ ಗೊತ್ತು ನಾವು ಬೆದರಿಕೆಯ ಹೇಳಿಕೆಗಳಿಗೆ ಬಗ್ಗುವುದಿಲ್ಲ. ಇರಾನ್ ಯಾವುದೇ ಬೆದರಿಕೆಗೆ ಹೆದರಿ ಶರಣಾಗುವುದಿಲ್ಲ. ಒಂದು ವೇಳೆ ಅಮೆರಿಕ ಯುದ್ಧದಲ್ಲಿ ಮಧ್ಯಪ್ರವೇಶಿಸಿ ನಮ್ಮ ಮೇಲೆ ದಾಳಿ ಮಾಡಿದರೆ ಅಮೆರಿಕ್ಕೆ ದೊಡ್ಡ ಹಾನಿ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಖಮೈನಿ ಹೇಳಿದರು.
ಇಸ್ಲಾಮಿಕ್ ದೇಶದ ಮೇಲೆ ಯಾರೂ ಶಾಂತಿ ಅಥವಾ ಯುದ್ಧದ ಆಯ್ಕೆಯ ಒತ್ತಡ ಹೇರಲು ಸಾಧ್ಯವಿಲ್ಲ. ಇಸ್ರೇಲ್ ಮಾಡುತ್ತಿರುವ ಯುದ್ಧದಲ್ಲಿ ಅಮೆರಿಕದ ಪಾತ್ರ ಮೊದಲು ಇರಲಿಲ್ಲ. ಆದರೆ ಕದನ ವಿರಾಮದ ಬಗ್ಗೆ ಹೇರುವ ಮೂಲಕ ಪರೋಕ್ಷವಾಗಿ ಇಸ್ರೇಲ್ ಗೆ ನೆರವು ಘೋಷಿಸಿತ್ತು. ಆದರೆ ಇದೀಗ ಕದನ ವಿರಾಮದ ತಂತ್ರದ ಹಿಂದೆ ಅಮೆರಿಕ ದೊಡ್ಡ ಷಡ್ಯಂತ್ರ ರೂಪಿಸಿರುವುದು ನಮಗೆ ತಿಳಿದು ಬಂದಿದೆ ಎಂದು ಅವರು ವಿವರಿಸಿದರು.



