ಅನಾರೋಗ್ಯದ ಸಮಸ್ಯೆಯಿಂದ ತಮಿಳು ಚಿತ್ರರಂಗದ ಹಿರಿಯ ನಟ ದಿಲ್ಲಿ ಗಣೇಶ್ ನಿಧನರಾಗಿದ್ದು, ಅವರಿಗೆ 80 ವರ್ಷ ವಯಸ್ಸಾಗಿತ್ತು.
ನವೆಂಬರ್ 9ರಂದು ರಾತ್ರಿ 11 ಗಂಟೆಗೆ ನನ್ನ ತಂದೆ ದೈವಾಧೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಪುತ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾನುವಾರ ಚೆನ್ನೈನ ರಾಮಪುರಂನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
40 ವರ್ಷಗಳ ಕಾಲ ತಮಿಳು ಚಿತ್ರರಂಗದ ಅವಿಭಾಜ್ಯ ಅಂಗವಾಗಿದ್ದ ದಿಲ್ಲಿ ಗಣೇಶ್ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯನಟ, ಖಳನಾಯಕ ಸೇರಿದಂತೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
1976ರಲ್ಲಿ ಕೆ. ಬಾಲಚಂದ್ರನ್ ನಿರ್ದೇಶನದ ಪಟ್ಟಿನಾ ಪ್ರವೇಶಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ದಿಲ್ಲಿ ಗಣೇಶ್, 1981ರಲ್ಲಿ ಎಂಗಮ್ಮ ಮಹಾರಾಣಿ ಚಿತ್ರದ ಪಾತ್ರದ ಮೂಲಕ ಮನೆಮಾತಾಗಿದ್ದರು. ಸಿಂಧು ಭೈರವಿ (1985), ನಾಯಗನ್ (1987), ಮೈಕಲ್ ಮದನ್ ಕಾಮರಾಜನ್ (1990), ಆಹಾ (1997), ತೆನಾಲಿ (2000) ಚಿತ್ರಗಳು ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.
1979ರಲ್ಲಿ ನಟಿಸಿದ್ದ ಪಾಸಿ ಚಿತ್ರದ ನಟನೆಗಾಗಿ ದಿಲ್ಲಿ ಗಣೇಶ್ ರಾಜ್ಯ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ ಪ್ರಶಸ್ತಿಗೆ ಪಾತ್ರರಾಗಿದ್ದರು.