ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಸಂಗೀತ ನಿರ್ದೇಶಕ ಪಾಲಾಷ್ ಮಚ್ಚಲ್ ಮದುವೆ ಅಧಿಕೃತವಾಗಿ ಮುರಿದುಬಿದ್ದಿದೆ. ಈ ಬಗ್ಗೆ ಇಬ್ಬರೂ ಇನ್ ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮೂಲಕ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿವಾಹ ಕುರಿತು ಹರಿದಾಡುತ್ತಿದ್ದ ವದಂತಿಗೆ ಮಂದಾನ ಹಾಗೂ ಪಾಲಷ್ ತೆರೆ ಎಳೆದಿದ್ದು, ನಾವು ಸಂಬಂಧ ಬೆಳೆಸುವ ಕುರಿತ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ನಮ್ಮ ವೈಯಕ್ತಿಕ ಜೀವನದ ಕುರಿತು ಖಾಸಗಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮಂದಾನ ತಮ್ಮ ಇನ್ಸ್ಟಾದಲ್ಲಿ, “ಕಳೆದ ಕೆಲವು ವಾರಗಳಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತು ವದಂತಿಗಳು ನಡೆಯುತ್ತಿವೆ, ಆದ್ದರಿಂದ ಈಗ ಮಾತನಾಡುವುದು ಅಗತ್ಯ ಎಂದು ಸ್ಮೃತಿ ಪೋಸ್ಟ್ ಮಾಡಿದ್ದಾರೆ. ನಾನು ತುಂಬಾ ಖಾಸಗಿ ಸ್ವಭಾವದವಳಾಗಿದ್ದು, ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ಮುಚ್ಚಾಲ್ ಜೊತೆಗಿನ ನನ್ನ ಮದುವೆಯನ್ನು ರದ್ದುಗೊಳಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ನಾನು ಈ ವಿಷಯವನ್ನು ಇಲ್ಲಿಗೆ ಕೊನೆಗೊಳಿಸಲು ಬಯಸುತ್ತೇನೆ ಎಂದು ಇನ್ಸ್ಟಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಪಾಲಾಷ್ ಇನ್ ಸ್ಟಾದಲ್ಲಿ ನಾನು ನನ್ನ ಜೀವನದಲ್ಲಿ ಮುಂದೆ ಸಾಗಲು ನಿರ್ಧರಿಸಿದ್ದೇನೆ. ನನ್ನ ವೈಯಕ್ತಿಕ ಜೀವನದ ಕುರಿತು ಕೈಗೊಂಡ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಪ್ರಸ್ತುತ ಘಟನೆಗಳಿಂದ ನಾನು ವಿಚಲಿತನಾಗಿದ್ದು, ಎದುರಿಸಲು ತುಂಬಾ ಕಷ್ಟವಾಗುತ್ತಿದೆ. ಈ ಕಠಿಣ ಸಂದರ್ಭದಲ್ಲಿ ನನ್ನ ವಿರುದ್ಧ ಆಧಾರ ರಹಿತ ವರದಿಗಳು ಪ್ರಕಟವಾಗುತ್ತಿರುವ ಬಗ್ಗೆ ನೋವಾಗಿದ್ದು, ಈ ಬಗ್ಗೆ ನನ್ನ ತಂಡ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ವದಂತಿಗಳನ್ನು ಪರಿಶೀಲಿಸದೇ ವರದಿ ಮಾಡುವುದು ತುಂಬಾ ತಪ್ಪಾಗಿದೆ. ಇದರಿಂದ ಇನ್ನೊಬ್ಬರ ಜೀವನ ಹಾಳುವ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ನವೆಂಬರ್ 23 ರಂದು ವಿವಾಹವಾಗಬೇಕಿತ್ತು. ಆದರೆ ಮದುವೆಗೆ ಕೆಲವು ಗಂಟೆಗಳ ಮೊದಲು, ಸ್ಮೃತಿಯ ತಂದೆ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರ ನಂತರ ವರ ಪಲಾಶ್ ಮುಚ್ಚಲ್ ಕೂಡ ಅನಾರೋಗ್ಯಕ್ಕೆ ಒಳಗಾದರು. ಇದರಿಂದಾಗಿ ಈ ಮದುವೆಯನ್ನು ಮುಂದೂಡಲಾಗಿತ್ತು.
ನಂತರ ಸ್ಮೃತಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಅಳಿಸಿಹಾಕಿದರು, ಇದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಪಲಾಶ್ ಮುಚ್ಚಲ್, ಮಂಧಾನ ಅವರನ್ನು ಚೀಟ್ ಮಾಡಿದ್ದು ಇನ್ನೊಬ್ಬ ಮಹಿಳೆಯೊಂದಿಗೆ ಚಾಟ್ ಮಾಡುತ್ತಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಇದು ಅನೇಕ ವದಂತಿಗಳಿಗೂ ಕಾರಣವಾಗಿದೆ. ಸ್ಮೃತಿ ತಂದೆ ಶ್ರೀನಿವಾಸ್ ಅವರ ಅನಾರೋಗ್ಯದ ಕಾರಣ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಎರಡೂ ಕುಟುಂಬಗಳು ಅಧಿಕೃತವಾಗಿ ಘೋಷಿಸಿದ್ದವು. ಇದರ ನಡುವೆಯೆ ಮಂಧಾನ ವಿವಾಹವನ್ನು ರದ್ದುಗೊಂಡಿದೆ ಎಂದು ಬಹಿರಂಗ ಪಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.



