ಶಿಸ್ತಿನ ದಾಳಿ ನಡೆಸಿದ ಕರ್ನಾಟಕ ಬೌಲರ್ ಗಳು ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮೊದಲ ದಿನವೇ ಕಡಿವಾಣ ಹಾಕಿದೆ.
ಮೊಹಾಲಿಯಲ್ಲಿ ಗುರುವಾರ ಆರಂಭಗೊಂಡ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು 309 ರನ್ ಸಂಪಾದಿಸಿದೆ.
ಪಂಜಾಬ್ ಬ್ಯಾಟ್ಸ್ ಮನ್ ಗಳು ಮತ್ತು ಕರ್ನಾಟಕದ ಬೌಲರ್ ಗಳ ಮೇಲಾಟದಲ್ಲಿ ಉಭಯ ತಂಡಗಳು ಸಮಬಲದ ಗೌರವ ಪಡೆದಿವೆ. ಆದರೆ ಪಂಜಾಬ್ 9 ವಿಕೆಟ್ ಕಳೆದುಕೊಂಡ ಕಾರಣ ನಾಳೆ ಎಷ್ಟು ಹೊತ್ತು ಬ್ಯಾಟಿಂಗ್ ಮಾಡಿ ರನ್ ಗಳಿಸುತ್ತದೆ ಎಂಬುದು ಪ್ರಮುಖವಾಗಿದೆ.
ಕರ್ನಾಟಕ ತಂಡದ ಪರ ಶ್ರೇಯಸ್ ಗೋಪಾಲ್ ಮತ್ತು ವಿದ್ಯಾದರ್ ಪಾಟೀಲ್ ತಲಾ 3 ವಿಕೆಟ್ ಉರುಳಿಸಿ ತೀವ್ರ ಹೋರಾಟ ನಡೆಸಿದರೆ, ಮೊಹಸಿನ್ ಖಾನ್ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.
ಪಂಜಾಬ್ ಆರಂಭಿಕ ಆಘಾತ ಅನುಭವಿಸಿದರೂ ಅಭಿಜೀತ್ ಗರ್ಜ್ 133 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 81 ರನ್ ಬಾರಿಸಿ ನೆರವಾಗಿದ್ದೂ ಅಲ್ಲದೇ ಎರಡನೇ ವಿಕೆಟ್ ಗೆ ನಾಯಕ ಉದಯ್ ಸರವಣ್ (44) ಜೊತೆಗೂಡಿ 102 ರನ್ ಪೇರಿಸಿದರು.
ನಂತರ ನಾಟಕೀಯ ಕುಸಿತ ಅನುಭವಿಸಿದಾಗ ಪಂಜಾಬ್ ನೆರವಿಗೆ ಬಂದ ಇಮೊಜಿತ್ ಸಿಂಗ್ ಚಾಹಲ್ 134 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಇವರಿಗೆ ಕೆಳ ಕ್ರಮಾಂಕದಲ್ಲಿ ಅನಮೋಲ್ ಮಲ್ಹೋತ್ರಾ (27) ಮತ್ತು ಆಯುಷ್ ಗೋಯೆಲ್ (23) ಮತ್ತು ಸುಕ್ದೀಪ್ ಸಿಂಗ್ (20) ಉತ್ತಮ ಬೆಂಬಲ ನೀಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.



