ಭಾರತ ಏಕದಿನ ತಂಡದಿಂದ ಕಡೆಗಣಿಸಲಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ 1 ರನ್ ಸೋಲುಂಡಿದೆ.
ಜೈಪುರದಲ್ಲಿ ಗುರುವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 45.1 ಓವರ್ ಗಳಲ್ಲಿ 216 ರನ್ ಗೆ ಆಲೌಟಾಯಿತು. ಸುಲಭ ಗುರಿ ಪಡೆದ ಮುಂಬೈ 26.2 ಓವರ್ ಗಳಲ್ಲಿ 215 ರನ್ ಗೆ ಪತನಗೊಂಡಿತು.
ಸುಲಭ ಗುರಿ ಪಡೆದಿದ್ದ ಮುಂಬೈ ಸರ್ಫರಾಜ್ ಖಾನ್ ಸ್ಫೋಟಕ ಆಟದಿಂದ 139 ರನ್ ಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಸರ್ಫರಾಜ್ ಖಾನ್ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದೂ ಅಲ್ಲದೇ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 62 ರನ್ ಚಚ್ಚಿದರು. ಸರ್ಫರಾಜ್ ಅದರಲ್ಲೂ ಅಭಿಷೇಕ್ ಶರ್ಮ ಅವರ ಒಂದೇ ಓವರ್ ನಲ್ಲಿ 30 ರನ್ ಕೊಳ್ಳೆ ಹೊಡೆದರು.
ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಗೆ ಸರ್ಫರಾಜ್ ಪಾತ್ರರಾದರು. ಇದಕ್ಕೂ ಮುನ್ನ ಬರೋಡಾದ ಅತಿತ್ ಸೆಥ್ 16 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಈ ಹಂತದಲ್ಲಿ ಗುರ್ನೂರ್ ಬ್ರಾರ್ ಮತ್ತು ಮಯಾಂಕ್ ಮರ್ಕಂಡೆ ಮಾರಕ ದಾಳಿ ನಡೆಸಿ ತಲಾ 4 ವಿಕೆಟ್ ಹಂಚಿಕೊಂಡು ಮುಂಬೈಗೆ ಗೆಲುವಿಗೆ ಅಡ್ಡಿಯಾದರು. ನಾಯಕ ಶ್ರೇಯಸ್ ಅಯ್ಯರ್ 34 ಎಸೆತಗಳಲ್ಲಿ 45 ರನ್ ಬಾರಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.



