ಅಲ್ಪ ಸಂಖ್ಯಾತರ ವಿರುದ್ಧ ದಬ್ಬಾಳಿಕೆ ಇದ್ದ ಕಡೆ ಜಿಹಾದ್ ಇರುತ್ತದೆ ಎಂದು ಜಾಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮಹಮೂದ್ ಮದನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾಡಿದ ಭಾಷಣದ ವೇಳೆ ಬಾಬ್ರಿ ಮಸೀದಿ ಸೇರಿದಂತೆ ಹಲವು ವಿವಾದಗಳ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಪರೋಕ್ಷ ಪ್ರಭಾವ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರಸ್ತುತ ನ್ಯಾಯಾಂಗ ಮತ್ತು ಸರ್ಕಾರಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ ಅನಗತ್ಯ ಹೇಳಿಕೆಗಳ ಮೂಲಕ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳ ತೀರ್ಪುಗಳು ಸರ್ಕಾರದ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತದೆ. ಇದು ಸಂವಿಧಾನದ ಮೇಲೆ ಆಗುತ್ತಿರುವ ದುಷ್ಪರಿಣಾಮವಾಗಿದೆ. ಇದರಿಂದ ಅಲ್ಪ ಸಂಖ್ಯಾತರ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಿಜೆಪಿಯ ಆಡಳಿತದ ಕುರಿತು ಶೇ.10ರಷ್ಟು ಬೆಂಬಲ ವ್ಯಕ್ತಪಡಿಸಿದರೆ, ಶೇ.30ರಷ್ಟು ಮಂದಿ ವಿರೋಧವಾಗಿದ್ದಾರೆ. ಆದರೆ ಶೇ.60ರಷ್ಟು ಅಲ್ಪ ಸಂಖ್ಯಾತರು ಮೌನವಾಗಿದ್ದು ಯಾವುದೇ ಪ್ರತಿಕ್ರಿಯೆ ನೀಡದೇ ತಟಸ್ಥ ನಿಲುವು ತಳೆದಿದ್ದಾರೆ. ಒಂದು ವೇಳೆ ಮೌನವಾಗಿರುವ ಶೇ.60 ಮಂದಿಯ ಮನಪರಿವರ್ತನೆ ಮಾಡಿದರೆ ದೊಡ್ಡ ಅಪಾಯ ಕಾದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗಳು ಮತ್ತು ಸರ್ಕಾರ ಲವ್ ಜಿಹಾದ್, ಒಡೆದ ಜಿಹಾದಿ, ಜಿಹಾದಿ ಭೂಮಿ ಸೇರಿದಂತೆ ಭಾಷಾ ಪ್ರಯೋಗಗಳನ್ನು ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಜಿಹಾದಿ ಯಾವಾಗಲೂ ಇರುತ್ತದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮದಾನಿ ಆರೋಪಿಸಿದರು.



