ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 43 ರನ್ ಗಳಿಂದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 18 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಪೇರಿಸಿತು.
ಕಠಿಣ ಗುರಿ ಬೆಂಬತ್ತಿದ ಸಿಎಸ್ ಕೆ 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟಾಯಿತು. ಇದು ಆರ್ ಸಿಬಿಗೆ ಸತತ ಎರಡನೇ ಗೆಲುವಾದರೆ, ಚೆನ್ನೈ ಸೂಪರ್ ಕಿಂಗ್ಸ್ ಗೆ ಹ್ಯಾಟ್ರಿಕ್ ಸೋಲಾಗಿದೆ.
ಕಠಿಣ ಗುರಿ ಬೆಂಬತ್ತಿದ ಚೆನ್ನೈ ತಂಡಕ್ಕೆ ಜೇಕಬ್ ಡುಫೆ 2 ವಿಕೆಟ್ ಕಿತ್ತು ಆರಂಭಿಕ ಆಘಾತ ನೀಡಿದರು. ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಮತ್ತು ಪ್ರಶಾಂತ್ ವೀರ್ ಹೋರಾಟ ನಡೆಸಿ ತಂಡದ ಮೊತ್ತ 200ರ ಗಡಿ ದಾಟಿಸಲು ಯತ್ನಿಸಿದರು.
ಸರ್ಫರಾಜ್ ಖಾನ್ 25 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿದರು. ಪ್ರಶಾಂತ್ ವೀರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 43 ರನ್ ಗಳಿಸಿದರು. ಜೆಮಿ ಓವರ್ಟನ್ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 37 ರನ್ ಗಳಿಸಿದರು.
ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಕಿತ್ತರೆ, ಡುಫೆ, ಅಭಿನಂದನ್ ಸಿಂಗ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಗಳಿಸಿದರು.


