ಟೆಹ್ರಾನ್: ಹರ್ಮುಜ್ ಜಲಸಂಧಿಯನ್ನು ಯುದ್ಧ ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಇರಾನ್ ಘೋಷಿಸಿದೆ. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವಣ ಮಾತುಕತೆ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, 90 ದಿನಗಳ ಯುದ್ಧ ಅಂತ್ಯಗೊಳ್ಳುವ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೆಲವೇ ಗಂಟೆಗಳಲ್ಲಿ ಸಿಹಿಸುದ್ದಿ ದೊರೆಯಲಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಇರಾನ್, 30 ದಿನಗಳಲ್ಲಿ ಹರ್ಮುಜ್ ಜಲಸಂಧಿ ಯಥಾಸ್ಥಿತಿಗೆ ಮರಳಿದೆ ಎಂದು ಭಾನುವಾರ ಘೋಷಣೆ ಮಾಡಿದೆ.
ಇದಕ್ಕೂ ಮುನ್ನ ಇರಾನ್ ಜೊತೆಗಿನ ಸಂಧಾನ ಸಭೆ ಉತ್ತಮ ರೀತಿಯಲ್ಲಿ ಸಾಗಿದ್ದು, ಶೀಘ್ರದಲ್ಲೇ ಯುದ್ಧ ಅಂತ್ಯಗೊಳ್ಳಬಹುದು ಎಂದು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಡರಾತ್ರಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಜಗತ್ತಿನ ಶೇ.40ರಷ್ಟು ತೈಲ ಸೇರಿದಂತೆ ಪ್ರಮುಖ ಸರಕು ಸಾಗಾಟ ನಡೆಯುವ ಹರ್ಮುಜ್ ಜಲಸಂಧಿ ಅಮೆರಿಕ-ಇರಾನ್ ಹಾಗೂ ಇಸ್ರೇಲ್ ನಡುವಣ ಯುದ್ಧದಿಂದ ಮುಚ್ಚಲಾಗಿತ್ತು. ಹರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿದ್ದರಿಂದ ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ಎಲ್ ಪಿಜಿ ಕೊರತೆ ಉಂಟಾಗಿ ಭಾರತ ಸೇರಿದಂತೆ ಹಲವು ದೇಶಗಳು ತತ್ತರಿಸಿದ್ದವು.
ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ಎಲ್ ಪಿಜಿ ಕೊರತೆ ಹಾಗೂ ದರ ಏರಿಕೆಯಿಂದ ಜಗತ್ತು ಬಡತನದತ್ತ ಸಾಗಿದ್ದು, ಹಣದುಬ್ಬರದಿಂದ ಹಲವು ದೇಶಗಳು ತತ್ತರಿಸಿದ್ದವು. ಈ ಎಲ್ಲಾ ಸಮಸ್ಯೆಗಳಿಗೆ ಇದೀಗ ಪರಿಹಾರ ಸಿಗಬಹುದು ಎಂಬ ವಿಶ್ವಾಸ ಮೂಡಿ ಬಂದಿದೆ.



