ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಉದ್ಯಮಿ ಹಾಗೂ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ನಟಿಯ ಗೆಳೆಯ ಹಾಗೂ ಉದ್ಯಮಿ ವೈಶಾಕ್ (45) ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಆರ್ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ನಟಿ ಕೃಷಿ ತಾಪಂಡ ನೆಲಮಂಗಲದ ‘ಕ್ಷೇಮ ವನ’ಕ್ಕೆ ಪ್ರಕೃತಿ ಚಿಕಿತ್ಸೆಗಾಗಿ ತೆರಳಿದ್ದು, ಅಲ್ಲಿಂದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ನಟಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ವೈಶಾಖ್ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ.
ವೈಶಾಖ್ ಈ ಹಿಂದೆ ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಅವರಿಗೆ ಬೆದರಿಕೆ ಹಾಕಿ ೭ ಕೋಟಿ ರೂ. ಬೇಡಿಕೆ ಇಟ್ಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆಟೊಮೊಬೈಲ್ ಮತ್ತು ಗ್ಯಾರೇಜ್ ಉದ್ಯಮ ನಡೆಸುತ್ತಿದ್ದ ವೈಶಾಖ್ಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, 14 ವರ್ಷದ ಒಬ್ಬ ಮಗನಿದ್ದಾನೆ.
ನಟಿ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದ ರೆಡ್ಡಿ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅರವಿಂದ ರೆಡ್ಡಿಗೆ ಜೀವಬೆದರಿಕೆ ಪತ್ರವೊಂದು ಬಂದಿತ್ತು. ಪೊಲೀಸರ ದಿಕ್ಕು ತಪ್ಪಿಸಲು ಬನಶಂಕರಿಯ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಈ ಪತ್ರ ಕಳುಹಿಸಲಾಗಿತ್ತು. ತನಿಖೆ ನಡೆಸಿದ ಹೆಚ್ಎಎಲ್ ಪೊಲೀಸರು ಕೊರಿಯರ್ ಮಾಡಿದ್ದ ಗ್ಯಾರೇಜ್ ಬಾಲಕನನ್ನು ವಶಕ್ಕೆ ಪಡೆದಾಗ, ಆತ ತನ್ನ ಬಾಸ್ ವೈಶಾಖ್ ಹೇಳಿದ್ದಾಗಿ ಬಾಯ್ಬಿಟ್ಟಿದ್ದ.
ಉದ್ಯಮಿ ಅರವಿಂದ ರೆಡ್ಡಿ ಕೇಸ್ನಲ್ಲಿ ಜೈಲು ಸೇರಿ ಬಂದಿದ್ದ ವಿಚಾರಕ್ಕೆ ಪತ್ನಿ ಹಾಗೂ ವೈಶಾಖ್ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಪತ್ನಿಯೊಂದಿಗಿನ ವೈಮನಸ್ಸಿನಿಂದ ಬೇಸತ್ತಿದ್ದ ವೈಶಾಖ್, ಆಗಾಗ ನಟಿ ಕೃಷಿ ತಾಪಂಡ ಅವರ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದರು. ಅದೇ ರೀತಿ ನಿನ್ನೆ ರಾತ್ರಿಯೂ ಕೃಷಿ ಅವರ ಅಪಾರ್ಟ್ಮೆಂಟ್ಗೆ ಬಂದಿದ್ದರು ಎನ್ನಲಾಗುತ್ತಿದೆ.



