ಬೆಂಗಳೂರು: ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸದೇ ಬೇಕಾಬಿಟ್ಟಿ ಸಂಚರಿಸುತ್ತಾ ಮಜಾ ಮಾಡುತ್ತಿದ್ದ ಫೆರಾರಿ ಕಾರನ್ನು ವಶಕ್ಕೆ ಪಡೆದ ಆರ್ ಟಿ ಓ ಅಧಿಕಾರಿಗಳು ಮಾಲೀಕನಿಗೆ ಬಿಸಿ ಮುಟ್ಟಿಸಿದ್ದಾರೆ.
ಸುಮಾರು 7.5 ಕೋಟಿ ರೂ. ಮೌಲ್ಯದ ಫೆರಾರಿ ಕಾರಿನ ಮೇಲೆ 1.58 ಕೋಟಿ ರೂ. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಮಾಲೀಕ ತೆರಿಗೆ ಪಾವತಿಸದೇ ಕಾರಿನಲ್ಲಿ ಸಂಚರಿಸುತ್ತಿದ್ದ.
ಗುರುವಾರ ಬೆಳಿಗ್ಗೆ ಬೆಂಗಳೂರಿನ ಲಾಲ್ ಬಾಗ್ ಬಳಿ ಫೆರಾರಿ ಕಾರವನ್ನು ವಶಕ್ಕೆ ಪಡೆದ ಆರ್ ಟಿಒ ಅಧಿಕಾರಿಗಳು ಸಂಜೆಯೊಳಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸುವಂತೆ ಗಡುವು ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರುವ ಫೆರಾರಿ ಕಾರಿಗೆ ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಲಾಗಿದೆ. 2023ರ ಸೆಪ್ಟೆಂಬರ್‌ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಬಗ್ಗೆ ಮಾಹಿತಿ ಪಡೆದಿದ್ದ ಆರ್ ಟಿಒ ಅಧಿಕಾರಿಗಳು ಬುಧವಾರ ತಪಾಸಣೆ ಮಾಡುವಾಗ ತೆರಿಗೆ ಬಾಕಿ ಇರುವುದು ಪತ್ತೆಯಾಗಿದೆ. ಕೂಡಲೇ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ ಹಿನ್ನೆಲೆ ಸಂಜೆವರೆಗೆ ಗಡುವು ನೀಡಲಾಗಿದ್ದು, ಅಷ್ಟರಲ್ಲಿ 1.58 ಕೋಟಿ ತೆರಿಗೆ ಪಾವತಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.



