ಕದನ ವಿರಾಮದ ನಂತರ ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ಭಾರೀ ಪ್ರಮಾಣದ ವಾಯುದಾಳಿಯಲ್ಲಿ ಗಾಜಾ ಆಂತರಿಕ ಭದ್ರತಾ ಮುಖ್ಯಸ್ಥ ಸೇರಿ ೪೧೩ ಮಂದಿ ಅಸುನೀಗಿದ್ದಾರೆ.
ಜನವರಿ 19ರಿಂದ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಭಾರೀ ಪ್ರಮಾಣದ ದಾಳಿ ನಡೆಸಿದೆ. ಇದರಿಂದ ಗಾಜಾದ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ರಂಜಾನ್ ವೇಳೆ ಇಸ್ರೇಲ್ ಏಕಾಏಕಿ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟ ಬಹುತೇಕ ಮಂದಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರಾಗಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.
ಉತ್ತರ ಗಾಜಾ, ಗಾಜಾ ನಗರ, ಡೇರ್-ಅಲ್- ಬಲಾಹ್, ಖಾನ ಯೂನಿಸ್, ರಫಾಹ್ ಪ್ರದೇಶಗಳಲ್ಲಿ ವಾಯುದಾಳಿ ನಡೆದಿದ್ದು, ಭಾರೀ ಪ್ರಮಾಣದ ಶಬ್ಧಗಳು ಕೇಳಿ ಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಇಸ್ರೇಲ್ ದಾಳಿಯಲ್ಲಿ ಹಮಾಸ್ ಪೊಲೀಸ್ ಮತ್ತು ಆಂತರಿಕ ಭದ್ರತಾ ಮುಖ್ಯಸ್ಥ ಮಹಮ್ಮದ್ ಅಬು ಮೃತಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ ಒತ್ತೆಯಾಳುಗಳ ಬಿಡುಗಡೆ ಆಗುವವರೆಗೂ ನಾವು ಯಾವುದೇ ಹಂತದಲ್ಲಿ ದಾಳಿ ನಡೆಸಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇನಾ ಬಲದೊಂದಿಗೆ ಹಮಾಸ್ ಮೇಲೆ ದಾಳಿ ನಡೆಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎಚ್ಚರಿಸಿದ್ದಾರೆ.



