ಮಧ್ಯಪ್ರಾಚ್ಯದಲ್ಲಿ ಯುದ್ಧದ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ತನ್ನ ದಾಳಿಯನ್ನು ಮತ್ತಷ್ಟು ವಿಸ್ತರಿಸಿದ್ದು, ದುಬೈನಲ್ಲಿ ಒಂದೇ ದಿನ ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಮಾಡಿ ಅಪಾರ ಹಾನಿ ಉಂಟು ಮಾಡಿದೆ.
ಮಂಗಳವಾರ ಮುಂಜಾನೆ ದುಬೈನ ಅಮೆರಿಕದ ಸೇನಾ ಕಟ್ಟಡ ಹಾಗೂ ದುಬೈ ಸಮೀಪವಿರುವ ಆಸ್ಟ್ರೇಲಿಯಾದ ವಾಯುನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ.
ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇನಾ ನೆಲೆಗಳಿಗೆ ನೆರವು ನೀಡುತ್ತಿರುವ ದುಬೈ ಮೇಲೆ ಇರಾನ್ ದಾಳಿ ಕೇಂದ್ರೀಕರಿಸಿದ್ದು, ಹಾರಾಡುತ್ತಾ ಬಂದ ಡ್ರೋಣ್ ಅಮೆರಿಕದ ಸೇನೆಯ ಕಟ್ಟಡಕ್ಕೆ ಬಡಿದಿದೆ. ನಂತರ ದೊಡ್ಡ ಸ್ಫೋಟ ಕಂಡು ಬಂದಿದ್ದು, ದಟ್ಟ ಹೊಗೆ ಆವರಿಸಿಕೊಂಡಿತು.
ಅರಬ್ ರಾಷ್ಟ್ರಗಳಲ್ಲಿ ಅಮೆರಿಕದ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ಮಾಡುತ್ತಿದ್ದು, ಈ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಇರಾನ್ ಘೋಷಿಸಿದೆ. ಅಲ್ಲದೇ ಹರ್ಮಾದ್ ಜಲಸಂಧಿಯಲ್ಲಿ ಯಾವುದೇ ಹಡಗು ಸಂಚರಿಸಿದರೂ ಅದರ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದೆ. ಇದರಿಂದ ನೂರಾರು ತೈಲ ಹಡಗುಗಳು ಜಲಸಂಧಿಯಲ್ಲಿ ನಿಂತಿದ್ದು, ಹಲವು ರಾಷ್ಟ್ರಗಳು ತೈಲ ಸಮಸ್ಯೆ ಎದುರಿಸುವ ಭೀತಿಗೆ ಸಿಲುಕಿವೆ.
ರಿಯಾದ್ ನ ಅಮೆರಿಕ ರಾಯಭಾರ ಕಚೇರಿ ಧ್ವಂಸ
ರಿಯಾದ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ ದಾಳಿ ನಡೆಸಿ ಧ್ವಂಸಗೊಳಿಸಿದೆ. ಇದರಿಂದ ಮಧ್ಯಪ್ರಾಚ್ಯದ ಬಿಕ್ಕಟ್ಟು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇರಾನ್ ನಲ್ಲಿ ಅಮೆರಿಕ ಕಾಲಿಡಲು ಹಿಂಜರಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಇರಾನ್ ಕ್ಷಿಪಣಿಗಳು ರಿಯಾದ್ ಅಮೆರಿಕದ ರಾಯಭಾರ ಕಚೇರಿ ಮೇಲೆ ಬಿದ್ದಿದೆ. ಈ ದಾಳಿ ಬೆನ್ನಲ್ಲೇ ಟ್ರಂಪ್ ಅದರ ಅಗತ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಇರಾನ್ ಮೇಲಿನ ದಾಳಿ ಆರಂಭವಾಗಿದೆ ಅಷ್ಟೆ. ನಾವಿನ್ನು ದೊಡ್ಡ ಮಟ್ಟದಲ್ಲಿ ದಾಳಿ ಮಾಡಿಲ್ಲ. ಶಸ್ತ್ರಾಸ್ತ್ರ ತ್ಯಜಿಸದೇ ಇದ್ದರೆ ನಾವು ಊಹೆಗೂ ಮೀರಿದ ದಾಳಿ ಮಾಡುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.
ಇರಾನ್ ದುಬೈ. ಕತಾರ್, ಜೋರ್ಡಾನ್ ಸೇರಿದಂತೆ ಹಲವು ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಿ ಅಪಾರ ಹಾನಿ ಉಂಟು ಮಾಡಿದೆ. ಅಲ್ಲದೇ ಇಸ್ರೇಲ್ ನ ಪ್ರಧಾನಿ ಕಚೇರಿ ಮೇಲೆ ಕೂಡ ಕ್ಷಿಪಣಿ ಹಾಕಿದೆ.
ಮತ್ತೊಂದೆಡೆ ಇಸ್ರೇಲ್ ಕೂಡ ಇರಾನ್ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದೆ. ದಾಳಿ ಪ್ರತಿದಾಳಿಯಲ್ಲಿ ಇರಾನ್ ನ ೫೫೦ ಮಂದಿ ಮೃತಪಟ್ಟಿದ್ದರೆ ಉಳಿದೆಡೆ ೫೦೦ ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.



