ಟೆಹ್ರಾನ್/ದುಬೈ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಣ ಯುದ್ಧ ಮೂರನೇ ದಿನಕ್ಕೆ ಮತ್ತಷ್ಟು ತೀವ್ರಗೊಂಡಿದೆ. ಸಾವಿನ ಸಂಖ್ಯೆ ಸಾವಿರ ದಾಟಿದ್ದು, ಮಧ್ಯಪ್ರಾಚ್ಯದಲ್ಲಿ ಗ್ರಹಣ ಹಿಡಿದಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಶನಿವಾರ ಆರಂಭಿಸಿದ ಯುದ್ಧದಲ್ಲಿ ಸುಪ್ರೀಂ ಅಯೊತುಲ್ಲಾ ಅಲ್ ಖಮೇನಿ, ರಕ್ಷಣಾ ಸಚಿವ, ಸೇನಾಧಿಕಾರಿ, ಕಮಾಂಡರ್ ಸೇರಿದಂತೆ 40ಕ್ಕೂ ಹೆಚ್ಚು ನಾಯಕರು ಹತ್ಯೆಯಾಗಿದ್ದಾರೆ.
ಖಮೇನಿ ಹತ್ಯೆ ನಂತರ ಪ್ರತಿದಾಳಿ ಮುಂದುವರಿಸುವ ಮೂಲಕ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದ ಇರಾನ್, ಅಬುಧಾಬಿ, ಜೋರ್ಡಾನ್, ದುಬೈ ಅಲ್ಲದೇ ಇಸ್ರೇಲ್ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದೆ. ಅಮೆರಿಕದ ಹಲವು ವಿಮಾನಗಳು ಪತನಗೊಂಡಿರುವುದಾಗಿ ದುಬೈ ಸೇನೆ ಹೇಳಿದೆ.
ಇರಾನ್ ಪರಮಾಣು ಕೇಂದ್ರದ ಬಳಿ ಇಸ್ರೇಲ್ ಕ್ಷಿಪಣಿ ಸ್ಫೋಟಗೊಂಡಿದೆ. ದಾಳಿಯಲ್ಲಿಇದುವರೆಗೆ ಒಟ್ಟಾರೆ 131 ನಗರಗಳು ಹಾನಿಗೊಳಗಾಗಿದ್ದು, 555 ಮಂದಿ ಮೃತಪಟ್ಟಿರುವುದಾಗಿ ಇರಾನ್ ರೆಡ್ ಕ್ರೆಸೆಂಟ್ ಹೇಳಿದೆ. ಮತ್ತೊಂದೆಡೆ ಇರಾನ್ ನಡೆಸಿದ ಪ್ರತಿದಾಳಿಗೆ ಅರಬ್ ರಾಷ್ಟ್ರಗಳು ನಲುಗಿದ್ದು, ಅಮೆರಿಕ ಮತ್ತು ಇಸ್ರೇಲ್ ಕೂಡ ತಲ್ಲಣಿಸಿದೆ.
ಸೋಮವಾರ ಬೆಳಿಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೇ ಅಬುದಾಬಿ, ಕತಾರ್, ಜೋರ್ಡಾನ್, ದುಬೈ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದೆ. ಮತ್ತೊಂದೆಡೆ ಇರಾನ್ ನ ರಾಜತಾಂತ್ರಿಕ ಕಚೇರಿ ಅಮೆರಿಕ ದಾಳಿ ನಡೆಸಿದರೆ, ಇರಾನ್ ನ ಲೆಬೆನಾನ್, ಬೈರುತ್ ಮೇಲೆ ಇಸ್ರೇಲ್ 250ಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿದೆ.
ದುಬೈ, ಕತಾರ್ ಮತ್ತು ಅಬುಧಾಬಿಯಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ಮುಂದುವರಿಸಿದ ಇರಾನ್ ಸೋಮವಾರ ಅಮೆರಿಕದ 3 ಎಫ್-15 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಆದರೆ 6 ಪೈಲೆಟ್ ಗಳು ಇಜೆಕ್ಟ್ ಮೂಲಕ ಪಾರಾಗಿದ್ದಾರೆ.
ಕತಾರ್ ವಿದ್ಯುತ್ ಸ್ಥಾವರ, ಸೌದಿಯ ತೈಲ ಘಟಕಕ್ಕೆ ಹಾನಿ
ಇರಾನ್ ನಡೆಸಿದ ಡ್ರೋನ್ ದಾಳಿ ನಂತರ ಸೌದಿಯ ಅರಾಮ್ಕೊ ಸಂಸ್ಥೆ ಸೋಮವಾರ ದಮ್ಮಾಮ್ ಬಳಿಯ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ಕಿಂಗ್ಡಮ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವಾಗಿದ್ದು, ದಿನಕ್ಕೆ ಅರ್ಧ ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕತಾರ್ 2 ವಿದ್ಯುತ್ ಸ್ಥಾವರಗಳ ಮೇಲೆ ಡ್ರೋಣ್ ದಾಳಿ ಮೂಲಕ ಧ್ವಂಸಗೊಳಿಸಿರುವ ಇರಾನ್, ಜೋರ್ಡಾನ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರಿಂದ ಬಂದ್ ಮಾಡಲಾಗಿದೆ. ಹಲವಾರು ಯುದ್ಧ ವಿಮಾನ ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ.
ಹೌತಿ ಬಂಡುಕೋರರ ಪ್ರತಿಜ್ಞೆ
ಇರಾನ್‌ನೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿರುವ ಹೆಜ್ಬೊಲ್ಲಾ, ಉತ್ತರ ಇಸ್ರೇಲ್‌ನ ಹೈಫಾ ಬಳಿಯ ಮಿಲಿಟರಿ ನೆಲೆಯ ಮೇಲೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಈ ಪರಿಣಾಮ ಸಂಘರ್ಷವು ಈಗ ಲೆಬನಾನ್‌ಗೂ ಹರಡಿದೆ.
ಲೆಬನಾನ್ ನ ರಾಜಧಾನಿ ಬೈರುತ್ ಮೇಲೆ ಇಸ್ರೇಲ್ ಕ್ಷಿಪಣಿಗಳು ಅಪ್ಪಳಿಸಿವೆ. 2024 ರ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ ಈ ದಾಳಿಗಳು ನಡೆದಿವೆ.
ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಹಡಗು ಮಾರ್ಗಗಳು ಮತ್ತು ಇಸ್ರೇಲ್ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.



