Tuesday, May 26, 2026
Google search engine
Homeವಿಶೇಷಹೆಲಿಕಾಪ್ಟರ್‌ ನಿಂದ ಹೂಮಳೆ ಸುರಿಸಿ ಸೀಮಂತಕ್ಕೆ ಪತ್ನಿಗೆ ಪತಿ ಭರ್ಜರಿ ಉಡುಗೊರೆ

ಹೆಲಿಕಾಪ್ಟರ್‌ ನಿಂದ ಹೂಮಳೆ ಸುರಿಸಿ ಸೀಮಂತಕ್ಕೆ ಪತ್ನಿಗೆ ಪತಿ ಭರ್ಜರಿ ಉಡುಗೊರೆ

ಸೀಮಂತ ಸಮಾರಂಭದಲ್ಲಿ ಹೆಲಿಕಾಪ್ಟರ್‌ ನಿಂದ ಹೂವಿನ ಸುರಿಮಳೆ ಸುರಿಸಿ ಪತ್ನಿಗೆ ಪತಿ ಅಚ್ಚರಿ ಮೂಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸೀಮಂತ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಪ್ರಕಾಶ್ ಕುಂಪಲ ತಮ್ಮ ಗರ್ಭಿಣಿ ಪತ್ನಿ ಅರ್ಪಿತಾ ಸೀಮಂತವನ್ನು ಸ್ಮರಣೀಯವಾಗಿಸಲು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಕಾಶದಲ್ಲಿ ಹೆಲಿಕಾಪ್ಟರ್ ಸುತ್ತಾಡಿ, ನೂರಾರು ಹೂವಿನ ಎಸಳುಗಳನ್ನು ಮಳೆಯಂತೆ ಸುರಿದ ದೃಶ್ಯ ಪತ್ನಿ ಮತ್ತು ಬಂಧು – ಬಳಗ ಹಾಗೂ ಅತಿಥಿಗಳನ್ನು ಆಶ್ಚರ್ಯಚಕಿತರನ್ನಾಗಿಸಿತು.

ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಈ ಅಪರೂಪದ ಕ್ಷಣವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ಮತ್ತು ಚಿತ್ರಗಳು ವೈರಲ್ ಆಗುತ್ತಿವೆ. ಮಂಗಳೂರಿನಲ್ಲಿ ಪತ್ನಿಯ ಸೀಮಂತಕ್ಕೆ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ.

ಪತ್ನಿಗೆ ಸರ್ಪ್ರೈಸ್ ಗಿಫ್ಟ್: ಈ ಬಗ್ಗೆ ಮಾತನಾಡಿದ ಪ್ರಕಾಶ್ ಕುಂಪಲ ಅವರು ಮದುವೆಗೆ ಹೆಲಿಕಾಪ್ಟರ್​​ನಿಂದ ಹೂವಿನ ಸುರಿಮಳೆ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ ಇದರ ಅನುಮತಿ ನನಗೆ ಮದುವೆಯ ಮೊದಲ ದಿನ ರಾತ್ರಿ ಸಿಕ್ಕಿತ್ತು. ಇದರಿಂದ ಆಗ ಸಾಧ್ಯವಾಗಲಿಲ್ಲ. ಅದಕ್ಕಾಗಿ ಸೀಮಂತಕ್ಕೆ ಮಾಡಬೇಕು ಎಂದು ನಿರ್ಧರಿಸಿದ್ದೆ.

ಇದಕ್ಕಾಗಿ ಕಳೆದ ಹತ್ತು ದಿನಗಳಿಂದ ಇದರ ಅನುಮತಿ ಪಡೆಯಲು ಶ್ರಮಿಸಿದ್ದೆ. ಸೀಮಂತದ ವೇಳೆ ಹೆಲಿಕಾಪ್ಟರ್​ನಿಂದ ಹೂವಿನ ಮಳೆ ಮಾಡುವ ವಿಚಾರ ನನ್ನ ಪತ್ನಿಗೆ ತಿಳಿದಿರಲಿಲ್ಲ. ಅವಳಿಗೆ ಸರ್ಪೈಸ್ ನೀಡಲು ಈ ವಿಚಾರ ಹೇಳಿರಲಿಲ್ಲ. ವೇದಿಕೆಯಿಂದ ಹೊರಾಂಗಣಕ್ಕೆ ಕರೆದುಕೊಂಡು ಬರುವಾಗಲೇ ಆಕೆಗೆ ಇದು ಗೊತ್ತಾಗಿದೆ. ಇದು ಆಕೆಗೆ ನನ್ನ ಸರ್ಪ್ರೈಸ್ ಗಿಫ್ಟ್​ ಎಂದರು.

ಪತ್ನಿಯ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ ಪ್ರಕಾಶ್ ಅವರ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀಮಂತ ಎನ್ನುವುದು ಕುಟುಂಬದ ಸಂತಸದ ಹಬ್ಬ. ಅದನ್ನು ಇನ್ನಷ್ಟು ಭರ್ಜರಿಯಾಗಿ ಆಚರಿಸಿ ಜೀವನದ ಅಮೂಲ್ಯ ಕ್ಷಣವನ್ನು ಮರೆಯಲಾಗದ ನೆನಪಾಗಿ ರೂಪಿಸಿದ ಈ ಘಟನೆ ಮಂಗಳೂರಿನಲ್ಲಿ ಚರ್ಚೆಯ ವಿಷಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments